

ಹನೂರು: ಪ್ರತಿಯೊಬ್ಬರೂ ಸಂವಿಧಾನದ ಹಕ್ಕು ಮತ್ತು ಕರ್ತವ್ಯವನ್ನು ಪಾಲಿಸುವುದರ ಜತೆಗೆ ಸುಭದ್ರ ದೇಶ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ರಂಗಮಂದಿರದಲ್ಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಾನುವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಂಶಗಳ ಆಧಾರದ ಮೇಲೆ ಸರ್ಕಾರ ಆಡಳಿತ ನಡೆಸುತ್ತಿದೆ. ಹಾಗಾಗಿ ಸರ್ವರ ಒಳಿತನ್ನು ಬಯಸಿ ಸಮಾನತೆಯನ್ನು ತಂದುಕೊಟ್ಟ ಸಂವಿಧಾನ ಕೇವಲ ಒಂದು ಸಮುದಾಯದ ಗ್ರಂಥವಲ್ಲ. ಅದು ಕಾನೂನನ್ನು ಒಳಗೊಂಡಿರುವ ಇಡೀ ದೇಶದ ಗ್ರಂಥ. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಪಾಲಿಸುವುದರ ಜತೆಗೆ ಸದೃಢ ದೇಶ ನಿರ್ಮಾಣಕ್ಕೆ ಹಾಗೂ ದೇಶದ ಐಕ್ಯತೆಗೆ ಪಣ ತೊಡಬೇಕು ಎಂದು ಹೇಳಿದರು.
ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ನೌಕರರಾದ ಮಹದೇವಸ್ವಾಮಿ, ಜನಾರ್ಧನ್, ಬೇಡಗಂಪಣ ಅರ್ಚಕರು, ಭಕ್ತರು ಇತರರು ಇದ್ದರು.
ಸಾಲೂರು ಮಠದಲ್ಲ್ಲಿ ಆಚರಣೆ: ಸಾಲೂರು ಬೃಹನ್ಮಠದಲ್ಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಧ್ವಜಾರೋಹಣವನ್ನು ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳು, ಮಠದ ಭಕ್ತರು ಇನ್ನಿತರರು ಇದ್ದರು.