ಕೆಂಪೇಗೌಡ ಜಯಂತಿ ಆಚರಿಸಲು ಎಲ್ಲರ ಸಹಕಾರ ಅಗತ್ಯ

19blrp1
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಬೇಲೂರು ತಾಲೂಕು ಆಡಳಿತದಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಎಂ.ಮಮತಾ, ಸತೀಶ್, ಮಾರುತಿ ಚಂದ್ರು ಇದ್ದರು.
Published on

ಬೇಲೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಈ ಬಾರಿ ಬೇಲೂರಿನಲ್ಲಿ ಅದ್ದೂರಿಯಾಗಿ ಆಚರಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ತಾಲೂಕು ಆಡಳಿತದಿಂದ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಹಾಸನದಲ್ಲಿ ರಾಜ್ಯ ಮಟ್ಟದ ಕೆಂಪೇಗೌಡ ಜಯಂತ್ಯುತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಇತರ ಎಲ್ಲ ತಾಲೂಕುಗಳಲ್ಲೂ ಜಯಂತಿಯನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಸಮುದಾಯದವರು ಯಾವುದೇ ಗುಂಪುಗಾರಿಕೆ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಹಬ್ಬದ ರೀತಿಯಲ್ಲಿ ನಾಡ ಪ್ರಭುವಿನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ. ಅದಕ್ಕಾಗಿ ಜೂನ್ 20ರಂದು ತಾಲೂಕಿನ ಒಕ್ಕಲಿಗ ಸಮುದಾಯದವರ ಸಭೆ ಕರೆಯಲಾಗಿದ್ದು ಆ ಸಭೆಗೆ ಪ್ರತಿಯೊಬ್ಬರೂ ಆಗಮಿಸಿ ಸಲಹೆ ನೀಡಬೇಕು. ಜತೆಗೆ ಜೂ. 27 ರಂದು ನಡೆಯುವ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಸಮಸ್ತ ಒಕ್ಕಲಿಗರು ಸೇರಿದಂತೆ ಸಾರ್ವಜನಿಕರು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಆಗಮಿಸುವಂತೆ ಮನವಿ ಮಾಡಿದರು.

ಕರವೇ ಅಧ್ಯಕ್ಷ ಭೋಜೇಗೌಡ ಮಾತನಾಡಿ, ಪ್ರತಿ ವರ್ಷವೂ ಒಕ್ಕಲಿಗರ ಯುವ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಸೇರಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಿಕೊಂಡು ಬರುತ್ತಿದ್ದೆವು. ಅದರೆ ಈ ಬಾರಿ ಪೂರ್ವಭಾವಿ ಸಭೆಯನ್ನು ಮಾಡದೆ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ಆದರೆ ಶಾಸಕರ ಮುಂದಾಳತ್ವದಲ್ಲಿ ಸಭೆಯನ್ನು ಆಯೋಜಿಸುವ ಮೂಲಕ ಅದ್ದೂರಿಯಾಗಿ ಜಯಂತಿ ಆಚರಿಸಲು ನಾವೆಲ್ಲರೂ ಕೈ ಜೋಡಿಸಲು ಬದ್ಧರಾಗಿದ್ದೇವೆ ಎಂದರು.
ತಹಸೀಲ್ದಾರ್ ಎಂ.ಮಮತಾ, ತಾಪಂ ಇಒ ಸತೀಶ್, ಒಕ್ಕಲಿಗರ ಯುವ ವೇದಿಕೆ ಗೌರವಾಧ್ಯಕ್ಷ ಮಾರುತಿ ಚಂದ್ರು, ಕಾರ್ಯದರ್ಶಿ ಗಣೇಶ್, ಕಸಾಪ ಅಧ್ಯಕ್ಷ ರಾಜೇಗೌಡ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net