

ಗೋಕರ್ಣ: ದೇವಾನು ದೇವತೆಗಳನ್ನು ಇನ್ನೆಲ್ಲಿಯೋ ಅಥವಾ ಎಲ್ಲೆಲ್ಲಿಯೋ ಅರಸುವ ಅಗತ್ಯವಿಲ್ಲ. ಸಮಸ್ತ ದೇವತೆಗಳು ನಮ್ಮೊಳಗೆ ಇದ್ದಾರೆ. ನಮ್ಮ ದೇಹ ದೇವತಾಮಯ. ಪ್ರತಿಯೊಬ್ಬರ ಶರೀರ ದೇವತೆಗಳ ಆವಾಸ ಸ್ಥಾನವಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಅಶೋಕೆಯ ಗುರುದೃಷ್ಟಿ ಭವನದಲ್ಲಿ 31ನೇ ಅನಾವರಣ ಚಾತುರ್ಮಾಸ್ಯ ಆಚರಣೆಯಲ್ಲಿ ಗುರುವಾರ ಆಯೋಜಿಸಿದ್ದ ‘ಕಾಲ’ ಸರಣಿ ಪ್ರವಚನದಲ್ಲಿ ಶ್ರೀಮಠದಲ್ಲಿ ಅನುಪಮ ಸೇವೆ ಸಲ್ಲಿಸಿ ಶ್ರೀಮಠದ ಸೇವಾ ಬಿಂದು ಗೌರವಕ್ಕೆ ಭಾಜನರಾಗಿ, ತುಂಬು ಯುವ ಸಮಯದಲ್ಲಿ ಅಜರಾಮರನಾದ ಶಿಶಿರ ಹೆಗಡೆ ಅಂಗಡಿ ಸೇವಾ ವೈಭವಗಳ ಸ್ಮರಣೆಯನ್ನು ಆತನ ಪಾಲಕರಾದ ಮಂಜುನಾಥ ಹೆಗಡೆ ಮತ್ತು ವಿಜಯಲಕ್ಷ್ಮೀ ಸಮ್ಮುಖ ಅನಾವರಣಗೊಳಿಸಿ ಆಶೀರ್ವದಿಸಿದರು.
ನಮ್ಮ ಶರೀರದ ಸರ್ವತ್ರ ದೇವತೆಗಳಿದ್ದಾರೆ. ಒಂದೊಂದು ಅಂಗದಲ್ಲಿ ಒಂದೊಂದು ದೇವತೆಯ ಪ್ರಾತಿನಿಧ್ಯವಿದೆ. ಈ ದೇಹದಲ್ಲಿನ ಪ್ರತಿ ಚಲನ- ವಲನ ಆ ದೇವತೆಗಳಿಂದ ನಿರ್ವಹಿತವಾಗಿರುತ್ತದೆ. ಶರೀರದ ಯಾವುದೇ ಅಂಗ ಸೂಕ್ತವಾದ ಕ್ರಿಯೆ-ಪ್ರತಿಕ್ರಿಯೆಗೆ ಒಳಗಾಗಿಲ್ಲ ಎಂದರೆ ಒಳಗಿರುವ ದೇವತೆ ಕೋಪಕ್ಕೊಳಗಾಗಿ ವಿರುದ್ಧ ಸ್ಪಂದನೆಗೆ ಮುಂದಾಗಿದೆ ಎಂದು ಅರ್ಥ. ಪ್ರತಿಯೊಂದು ದೇಹವೂ ದೇವತಾ ಮಯವಾಗಿರುವುದರಿಂದ ನಾವು ಅನ್ಯರಿಗೆ ಮಾಡುವ ಅನ್ಯಾಯ, ಕೊಡುವ ಅಸುಖ ಮತ್ತು ನೀಡುವ ಪೀಡೆ ಅಲ್ಲಿ ವಾಸಿತ ದೇವತೆಗಳಿಗೆ ಮುಟ್ಟಿ ಅವುಗಳಿಂದ ತಿರುಗಿ ನಮ್ಮನ್ನೇ ಬಂದು ಸೇರುತ್ತವೆ. ದೇಹ ಎನ್ನುವುದು ಬಹುದೇವತಾ ಸ್ಥಾನವಾಗಿರುವುದರಿಂದ ನಮ್ಮ ಕೈ- ಮೈಗಳನ್ನು ಒಳಗೊಂಡು ಪ್ರತಿ ಅಂಗವನ್ನು ನಾವು ಬಹುವಾದ ಎಚ್ಚರಿಕೆಯಿಂದ ಬಳಸಬೇಕು ಎಂದರು.
ಶಿಶಿರನ ನೆನಪು: ಶ್ರೀಮಠಕ್ಕೆ ಅನುಪಮ ಸೇವೆ ಸಲ್ಲಿಸಿ ಏರುಜವ್ವನದಲ್ಲಿ ಆಕಸ್ಮಿಕವಾಗಿ ಮರೆಯಾದ ಶಿಶಿರ ಹೆಗಡೆ ಕುರಿತು ಭಾವನಾತ್ಮಕವಾಗಿ ಸ್ಮರಣಾಂಜಲಿಯಿತ್ತ ಶ್ರೀಗಳು ಭಾವ ಮುಂದಾದಾಗ ಭಾಷೆ ಇನ್ನಿಲ್ಲದಂತೆ ಹಿಂದಾಗುತ್ತದೆ. ಸ್ವಂತಕ್ಕೆ ಏನೂ ಅಲ್ಲ. ಸಮಾಜಕ್ಕೆ ತನ್ನದೆಲ್ಲ ಎಂಬಂತೆ ಬದುಕಿ ತೋರಿದ ಶಿಶಿರ ಶ್ರೀಮಠದ ಸರ್ವ ಶಿಷ್ಯಭಕ್ತರಿಗೆ ಸ್ಫೂರ್ತಿಯಾಗಬೇಕು. ಶುಭಕಾಲವಾದ ಶಿಶಿರ ಶಾಶ್ವತವಾಗಿ ಶ್ರೀಮಠದಲ್ಲಿ ಸ್ಥಾಯಿಯಾಗಿರುತ್ತಾನೆ ಎಂದು ಶ್ರೀಗಳು ಅನುಗ್ರಹವಿತ್ತರು.
ಚಾತುರ್ಮಾಸ್ಯ ಸಮಿತಿಯ ಜಿ.ವಿ. ಹೆಗಡೆ, ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮ, ಡಾ. ರವಿ ಪಾಂಡವಪುರ ಮತ್ತಿತರರಿದ್ದರು. ಧರ್ಮಸಭೆಯನ್ನು ಸುಧನ್ವ ಶಾಸ್ತ್ರಿ ನಿರ್ವಹಿಸಿದರು.