

ಮಡಿಕೇರಿ: ಮೊಗೇರ ಸಮಾಜದ ಸಂಘಟನೆಗೆ ಪ್ರತಿಯೊಬ್ಬರು ಶ್ರಮಿಸುವದರ ಜತೆಗೆ ಪ್ರಗತಿಯನ್ನು ಸಾಧಿಸಬೇಕು ಎಂದು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಗೌತಮ್ ಶಿವಪ್ಪ ಕರೆ ನೀಡಿದರು.
ವಿರಾಜಪೇಟೆಯ ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಮೊಗೇರ ಗ್ರಾಮ ವಿಕಾಸ ಯೋಜನೆ ಅನುಷ್ಠಾನ ಕಾರ್ಯಕ್ರಮ ಮತ್ತು ವಿರಾಜಪೇಟೆ ತಾಲೂಕು ಸಮಿತಿ ಪುನರ್ ರಚನೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊಗೇರ ಜನಾಂಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆನ್ನುವ ಉದ್ದೇಶದಿಂದ ಜಿಲ್ಲಾ ಮೊಗೇರ ಸೇವಾ ಸಮಾಜವು ‘‘ಮೊಗೇರ ಗ್ರಾಮ ವಿಕಾಸ ಯೋಜನೆ’’ ಎಂಬ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ನಿವೇಶನ ಮತ್ತು ವಸತಿ ರಹಿತರ ಮಾಹಿತಿಯೊಂದಿಗೆ ಸಮುದಾಯದ ಜನಗಣತಿಯನ್ನು ಮೊಗೇರ ಸಮಾಜದ ಗೌರವ ಪ್ರತಿನಿಧಿಗಳ ಮೂಲಕ ಮಾಡಲಾಗುತ್ತಿದ್ದು, ಎಲ್ಲರೂ ಸಹಕರಿಸಬೇಕು. ಮೊಗೇರ ಸಮಾಜದ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಮತ್ತು ಪ್ರಗತಿಯನ್ನು ಸಾಧಿಸಬೇಕು ಎಂದು ಗೌತಮ್ ಶಿವಪ್ಪ ಕರೆ ನೀಡಿದರು.
ಸಮಾಜದ ಹಿರಿಯ ಸ್ಥಾಪಕ ಸದಸ್ಯ ಅಕ್ಕಮ್ಮ ಮೂರ್ತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಠಲ್ ಪೋಸ್ಟ್ ಮಾಸ್ಟರ್, ಜಿಲ್ಲಾ ಸಮಿತಿ ಸದಸ್ಯರಾದ ಎಂ.ಪಿ.ದೇವಪ್ಪ, ಸುರೇಶ್, ಮಂಜು, ಕುಶಾಲನಗರ ತಾಲೂಕು ಸಮಿತಿ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.
ವಿರಾಜಪೇಟೆ ನೂತನ ಸಮಿತಿ: ಸಭಾ ಕಾರ್ಯಕ್ರಮದ ನಂತರ ವಿರಾಜಪೇಟೆ ತಾಲೂಕು ನೂತನ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ರಾಮು ಸಿದ್ದಾಪುರ, ಉಪಾಧ್ಯಕ್ಷರಾಗಿ ಲಲಿತ ಅಮ್ಮತ್ತಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಪಾಲಿಬೆಟ್ಟ, ಸಹ ಕಾರ್ಯದರ್ಶಿ ವಿಶ್ವ, ಖಜಾಂಚಿ ಪುನೀತ್ ರಾಮನಗರ, ಗೌರವಾಧ್ಯಕ್ಷರಾಗಿ ಬರಡಿ ಮಂಜು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರು, ವಿಶ್ವನಾಥ್, ನಿರ್ಮಲ ರಮೇಶ್, ಹರೀಶ್ ಪಾಲಿಬೆಟ್ಟ, ಸತೀಶ್ ಅಮ್ಮತ್ತಿ, ಸಚಿನ್ ಗೋಣಿಕೊಪ್ಪ, ಗುರುಪ್ರಸಾದ್, ಕೃಷ್ಣಪ್ಪ ಅವರನ್ನು ನೇಮಕ ಮಾಡಲಾಯಿತು.