ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಿ: ಡಾ.ಮಂತರ್ ಗೌಡ

muda padagrahana
Published on

ಮಡಿಕೇರಿ: ಯಾವುದೇ ಕಡತವಿರಲಿ ಅದನ್ನು ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಡಳಿತ ಮಂಡಳಿಗೆ ಕಿವಿಮಾತು ಹೇಳಿದರು.


ಮೂಡಾ ಕಛೇರಿಯ ಆವರಣದಲ್ಲಿ ಬುಧವಾರ ನಡೆದ ನೂತನ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮತ್ತು ಸದಸ್ಯರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಹಿರಿಯ ಮತ್ತು ಕಿರಿಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದು, ಮಡಿಕೇರಿ ನಗರದ ಜನತೆಗೆ ತೊಂದರೆಯಾಗದ ಹಾಗೆ ಕಾರ್ಯ ನಿರ್ವಹಿಸಬೇಕು. ಹಲವು ಕಾರ್ಯಕರ್ತರು ಆಕಾಂಕ್ಷಿಗಳಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.


ನೂತನ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಮೂಡಾ ಕಛೇರಿಯಲ್ಲಿ ಇತ್ಯರ್ಥವಾಗದೇ ಇರುವ ಕಡತಗಳ ವಿಲೇವಾರಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಐದು ವರ್ಷಕೊಮ್ಮೆ ನಡೆಯುವ ಸಿಡಿಪಿ ಪ್ಲಾನ್ ೨೦೨೧ ರಲ್ಲಿ ತಯಾರಿಸಬೇಕಿತ್ತು. ಅದು ಆಗದೆ ನಗರದ ಜನತೆಗೆ ಸಮಸ್ಯೆಯಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಅದನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮೂಡಾಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಭಂದಿಸಿದಂತೆ ಈಗಾಗಲೇ ಶಾಸಕರೊಂದಿಗೆ ಚರ್ಚಿಸಿದ್ದು, ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು ತಿಳಿಸಿದರು.


ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮಡಿಕೇರಿ ಮಂಜಿನ ನಗರಿ ಎಂದು ಖ್ಯಾತಿ ಪಡೆದಿದೆ. ಈ ಹೆಸರು ಉಳಿಯಲು ಮಡಿಕೇರಿ ನಗರದ ಪ್ರಕೃತಿಯನ್ನು ಸುಂದರವಾಗಿ ಇಟ್ಟುಕೊಳ್ಳುವ ಪ್ರಯತ್ನ ಎಲ್ಲರಿಂದಲೂ ಆಗಬೇಕು. ನೂತನ ಆಡಳಿತ ಮಂಡಳಿಯಿಂದ ಉತ್ತಮ ಕೆಲಸ ಆಗುವ ಭರವಸೆ ತಮಗೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಮಾತನಾಡಿ, ಮಡಿಕೇರಿ ನಗರವನ್ನು ಸಮಸ್ಯೆ ಮುಕ್ತ ನಗರವಾಗಿಸಲು ಮೂಡಾ ಆಡಳಿತ ಮಂಡಳಿ ಪಣ ತೊಡಬೇಕು. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ನಾಮನಿರ್ದೇಶನ ಮಾಡುವ ಮೂಲಕ ಗೌರವಿಸಲಾಗುತ್ತದೆ. ೨೪*೭ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸ್ಥಾನ ಮಾನ ನೀಡುವಲ್ಲಿ ಶಾಸಕರು ಮತ್ತು ನಾಯಕರು ವಿಳಂಬ ಮಾಡಬಾರದು. ತಮಗೆ ಕೊಡಗಿನ ಜನತೆ ಮತ ನೀಡಿದ್ದು ವಾರಕ್ಕೊಮ್ಮೆ ಮಡಿಕೇರಿಯಲ್ಲಿದ್ದು ಜನರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಮಟ್ಟದಲ್ಲಿ ಶಾಸಕರೊಡಗೂಡಿ ಸಮಸ್ಯೆಗಳ ಇತ್ಯರ್ಥ ಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.


ಕೆಪಿಸಿಸಿ ಮುಖಂಡ ಟಿ.ಪಿ.ರಮೇಶ್, ಮಾಜಿ ಮುಡಾ ಅಧ್ಯಕ್ಷೆ ಸುರಯ್ಯ ಅಬ್ರಾರ್, ನಂಜನಗೂಡು ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಮಾಜಿ ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ನೂತನ ಮೂಡಾ ಸದಸ್ಯರಾದ ಕಾನೆಹಿತ್ಲು ಮೊಣ್ಣಪ್ಪ, ಚಂದ್ರಶೇಖರ್, ಮೀನಾಜ್ ಪ್ರವೀಣ್, ಸುದಯ್ ನಾಣಯ್ಯ, ಕೂಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net