ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿ: ಶಾಸಕ ಸಿ.ಪುಟ್ಟರಂಗಶೆಟ್ಟಿ

mysore
Published on

ಮೈಸೂರು: ಸಮುದಾಯದ ಸಂಘಟನೆ ಬಹಳ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಒಂದಾಗುವ ಮೂಲಕ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಉಪ್ಪಾರ ಸಮುದಾಯದವರಿಗೆ ಹೇಳಿದರು.


ಉಪ್ಪಾರ ಸ್ನೇಹ ಬಳಗದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಮಾಜದಲ್ಲಿ ಯಾರನ್ನೂ ಅಷ್ಟು ಸುಲಭವಾಗಿ ಬೆಳೆಯಲು ಬಿಡುವುದಿಲ್ಲ. ಇದು ಸರಿಯಲ್ಲ. ವೈಯಕ್ತಿಕವಾಗಿ ನಾವು ಹೊರಗೆ ಹೇಗೆ ಇದ್ದರೂ, ಸಮಾಜದ ವಿಷಯ ಬಂದಾಗ ಎಲ್ಲರೂ ಒಂದಾಗಬೇಕು ಎಂದರು.


ಜಿಪಂ ಮಾಜಿ ಸದಸ್ಯೆ ಲತಾ ಸಿದ್ದಶೆಟ್ಟಿ ಮಾತನಾಡಿ, ಸೂಕ್ಷ್ಮ, ಸಣ್ಣ ಸಮುದಾಯಗಳ ಅಭಿವೃದ್ಧಿ ರಾಜಕೀಯ ಅಧಿಕಾರ ಬಹಳ ಮುಖ್ಯ. 4ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಮುದಾಯದ ನಾಯಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಎಲ್ಲರೂ ಈ ಕುರಿತು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.


ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ ಮಾತನಾಡಿದರು.


ಸನ್ಮಾನ: ಶಾಸಕ ಸಿ.ಪುಟ್ಟರಂಗಶೆಟ್ಟಿ, ಸಮುದಾಯದ ಪ್ರಮುಖರಾದ ನಟರಾಜು, ನಾಗರಾಜು, ಮಹದೇವಸ್ವಾಮಿ, ಶಿವನಂಜಶೆಟ್ಟಿ, ಶಿವಕುಮಾರ್, ಕೆ.ಎಂ.ಶಿವಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.


ಸಾಹಿತಿ ಸಿ.ಚಾಮಶೆಟ್ಟಿ, ರಾಜ್ಯ ಉಪ್ಪಾರ ಸಂಘದ ಉಪಾಧ್ಯಕ್ಷ ಎಸ್.ಎನ್.ಕಲ್ಲೇಶ್, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಶಿವಕುಮಾರ್, ಮಳವಳ್ಳಿ ತಾಲೂಕು ಅಯ್ಯನ ಸರಗೂರು ಮಠದ ಮಹದೇವಸ್ವಾಮಿ, ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಕೆ.ಎಂ.ಶಿವಕುಮಾರಸ್ವಾಮಿ, ಮುಖಂಡ ಮಲ್ಲಶೆಟ್ಟಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net