

ಮೈಸೂರು: ಬಸವ ಧರ್ಮ ಪ್ರಚಾರ ಮಾಡುವ ನಿಟ್ಟಿನಲ್ಲಿ ಎಲ್ಲರು ಶ್ರಮಿಸಬೇಕು ಎಂದು ನಗರದ ಶ್ರೀ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ ಕರೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಲಿಂಗಾಯತ ಸಾಂಸ್ಕೃತಿಕ ಸಮಿತಿ, ಬಸವಕೇಂದ್ರ, ರಾಷ್ಟ್ರೀಯ ಬಸವ ದಳ, ತರಳಬಾಳು ಸಮಾಗಮ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕ ವತಿಯಿಂದ ನಗರದ ಬಸವೇಶ್ವರ ರಸ್ತೆಯ ಬಸವಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಪ್ರತಿನಿತ್ಯ ಒಂದು ವಚನವನ್ನು ಕಲಿಸಬೇಕು. ಆ ವಚನದ ಮಹತ್ವ ಏನು ಎಂಬುದನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ಶ್ರೀ ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ನಗರ ಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ಎಂ. ಮರಪ್ಪ, ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ರೇಚಣ್ಣ, ಸದಸ್ಯೆ ಉಷಾ ಇದ್ದರು.