

ಮಡಿಕೇರಿ: ಕನ್ನಡ ಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಆವರಣದಲ್ಲಿ ಸೋಮವಾರ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಕಸಾಪದ ೧೧೧ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಜನರಡೆಗೆ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪತ್ರಿಕೆಗಳನ್ನು ಕೊಂಡು ಓದುವ, ಪುಸ್ತಕಗಳನ್ನು ಖರೀದಿಸುವ ಕಡೆಗೆ ಗಮನ ಹರಿಸಬೇಕು. ಆ ಮೂಲಕ ಕನ್ನಡ ಮತ್ತು ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಬೇಕಿದೆ. ಕನ್ನಡ ಭಾಷೆಯ ಅಸ್ಮಿತೆಯ ಪ್ರತೀಕವಾದ ನಾಡಿನ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಅವುಗಳನ್ನು ಉಳಿಸಿ ಪುನ:ಶ್ಚೇತನಗೊಳಿಸುವ ದಿಸೆಯಲ್ಲಿ ಜನಾಂದೋಲನ ನಡೆಸಲು ಶ್ರಮಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕಿದೆ ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಅಭಿರುಚಿ ಬೆಳೆಸುವ ದಿಸೆಯಲ್ಲಿ ಸಾಹಿತ್ಯದ ನಡಿಗೆ ಶಾಲೆಯೆಡೆಗೆ ಎಂಬ ಅಭಿಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂಭ್ರಮ ಬೆಳೆಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಕೊಡಗಿನಲ್ಲಿ ಕಸಾಪ ವತಿಯಿಂದ ಸಾಹಿತ್ಯದ ನಡಿಗೆ ಹಳ್ಳಿಯೆಡೆಗೆ, ಗ್ರಾಮಸಿರಿ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರೆಡೆಗೆ ಸಾಹಿತ್ಯ ಚಳವಳಿಯನ್ನು ನಡೆಸಲಾಗುತ್ತಿದೆ. ಈಗ ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಪರಿಷತ್ತಿನ ವತಿಯಿಂದ ನಿರಂತರವಾಗಿ ಕನ್ನಡದ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಹೊರ ರಾಜ್ಯಗಳಲ್ಲೂ ಘಟಕಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲವೂ ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತ. ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.
ಜಿಲ್ಲೆಯಲ್ಲಿ ಕಸಾಪ ವತಿಯಿಂದ ಕನ್ನಡ ಸಾಹಿತ್ಯವನ್ನು ಬೆಳೆಸುವ ದಿಸೆಯಲ್ಲಿ ಹಲವಾರು ವೈವಿಧ್ಯ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾಹಿತ್ಯ ಪರ ಚಟುವಟಿಕೆಗಳಿಂದ ಉದಯೋನ್ಮುಖ ಸಾಹಿತಿಗಳು, ಲೇಖಕರು ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಉತ್ತಮವಾಗಿ ಸಂಘಟನೆಯಾಗುತ್ತಿರುವ ಬಗ್ಗೆ ಪ್ರಶಂಸಿದರು. ಕನ್ನಡ ನಿಘಂಟು ರಚಿಸಿದ ಕಿಟ್ಟಲ್ ನಂತಹ ಮೇಧಾವಿ ಸಾಹಿತಿ ಸೇರಿದಂತೆ ಸಾಹಿತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಬೇಕು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಚಂದನ ಬಿ.ದೇವ್, ತಾವು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಅನುಭವ ಹಂಚಿಕೊಂಡರು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ನಾಪೋಕ್ಲು ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಕಸಾಪ ಕಚೇರಿ ಸಿಬ್ಬಂದಿ ರೇಣುಕ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.