ಬುದ್ಧನ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು

1 ckm 2
ಚಿಕ್ಕಮಗಳೂರಿನ ಗವನಹಳ್ಳಿ ಸರ್ವೆ ನಂಬರ್ ೯೩ ರಲ್ಲಿ ಬುದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ ಬುದ್ಧ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ನೆರವೇರಿತು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ವಕೀಲ ಅನಿಲ್‌ಕುಮಾರ್, ಡಿಎಸ್‌ಎಸ್ ಮುಖಂಡರಾದ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಹುಣಸೇಮಕ್ಕಿ ಲಕ್ಷ್ಮಣ, ಕೂದುವಳ್ಳಿ ಮಂಜು, ಹೊನ್ನೇಶ್, ವಸಂತಕುಮಾರ್, ಅನಂತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬುದ್ಧ ಮಾನವೀಯತೆ ಮತ್ತು ಜ್ಞಾನದ ಬೆಳಕನ್ನು ಸಾರಿದ ಮಹಾನ್ ಪುರುಷ. ಹೀಗಾಗಿ ಬುದ್ಧನ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ನಗರ ಹೊರವಲಯದ ಗವನಹಳ್ಳಿಯ ಸರ್ಕಾರಿ ಜಾಗದಲ್ಲಿ ಬುದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಬುದ್ಧನ ವಿಗ್ರಹ ಅನಾರಣಗೊಳಿಸಿ ಮಾತನಾಡಿದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಪ್ರತಿಯೊಬ್ಬರು ಬುದ್ಧನ ಹಾದಿಯಲ್ಲಿ ನಡೆಯಬೇಕು ಎಂದಿದ್ದಾರೆ. ಆ ನಿಟ್ಟಿನಲ್ಲಿ ಈ ದೇಶ ಬುದ್ಧನ ನಾಡಾಗಬೇಕು. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಇಲ್ಲಿ ಬುದ್ದನ ಪ್ರತಿಮೆಯನ್ನು ಸಾಂಕೇತಿಕವಾಗಿ ಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.
ಪ್ರಪಂಚದಾದ್ಯಂತ ತಡವಾಗಿಯಾದರೂ ಬುದ್ಧನ ಅನುಯಾಯಿಗಳು ಹೆಚ್ಚಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಗರದ ಕುವೆಂಪು ಕಲಾಮಂದಿರದಲ್ಲಿಯೂ ಕೂಡ ಬುದ್ಧ ಧರ್ಮ ದೀಕ್ಷಾ ಕಾರ್ಯಕ್ರಮ ನಡೆದಿತ್ತು. ಬೌದ್ಧ ಧರ್ಮದ ಕಾರ್ಯಚಟುವಟಿಕೆಗಳನ್ನು ನಡೆಸಲು ನಮಗೆ ಬುದ್ಧ ಅಧ್ಯಯನ ಕೇಂದ್ರದ ಸ್ಥಾಪನೆಯ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಗವನಹಳ್ಳಿ ಸರ್ವೆ ನಂಬರ್ ೯೩ ರಲ್ಲಿ ೧೦ ಎಕರೆ ಜಾಗವನ್ನು ಕೇಳಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಕಾರ್ಯದರ್ಶಿ, ಡಿಸಿ, ಎಸಿ ಗಮನಕ್ಕೆ ತಂದಿದ್ದೇವೆ. ನಮ್ಮ ಮನವಿಗೆ ಮನ್ನಣೆ ನೀಡಿ ಭೂಮಿ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ವಕೀಲ ಅನಿಲ್‌ಕುಮಾರ್ ಮಾತನಾಡಿ, ಬುದ್ಧ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಇಂದು ಸಾಂಕೇತಿಕವಾಗಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ ಎಂದರು.
ಡಿಎಸ್‌ಎಸ್ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ, ಸ್ಥಳೀಯ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ದಲಿತರ ಬಗ್ಗೆ ಅಸಮಾಧಾನ ಇದ್ದಂತಿದೆ. ಅದನ್ನು ಬದಿಗಿಟ್ಟು ಇದೀಗ ನಾವೇ ಹುಡುಕಿ ಕೊಟ್ಟಿರುವ ಸರ್ಕಾರಿ ಭೂಮಿಯನ್ನು ಬುದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಡಿಎಸ್‌ಎಸ್ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿವರೆಗೆ ಆಳಿದ ಯಾವೊಬ್ಬ ಜನಪ್ರತಿನಿಗಳು ಬುದ್ಧ, ಬಸವ, ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸವ ಕೆಲಸಕ್ಕೆ ಕೈಹಾಕಲಿಲ್ಲ. ಇನ್ನಾದರೂ ಜಾಗ ಮಂಜೂರುಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬುದ್ಧ ವಿಗ್ರಹ ಪ್ರತಿಷ್ಠಾಪನೆಯ ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು. ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಕೂದುವಳ್ಳಿ ಮಂಜು, ಹೊನ್ನೇಶ್, ವಸಂತಕುಮಾರ್, ಅನಂತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net