ಕೆರೆ&ಕುಂಟೆಗಳ ರಕ್ಷಣೆಗೆ ಎಲ್ಲರೂ ಕ್ರಮವಹಿಸಿ

10 web 2
Published on

ರಾಜಸ್ವ ನಿರೀಕ್ಷಕರಿಗೆ ತಹಸೀಲ್ದಾರ್​ ವೆಂಕಟೇಶಪ್ಪ ಸೂಚನೆ

ಬೂದಿಕೋಟೆ: ತಾಲೂಕಿನ ಕೆರೆ&ಕುಂಟೆಗಳು ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಕೆರೆಗಳ ಸ್ವರೂಪ ಹಾಳು ಮಾಡುತ್ತಿರುವವರ ವಿರುದ್ಧ ಕಾನೂ ಕ್ರಮ ಜರುಗಿಸುವಂತೆ ರಾಜಸ್ವ ನಿರೀಕ್ಷಕರಿಗೆ ತಹಸೀಲ್ದಾರ್​ ವೆಂಕಟೇಶಪ್ಪ ಸೂಚಿಸಿದ್ದಾರೆ.
ಮಳೆಯಿಲ್ಲದೆ ಬತ್ತಿ ಹೋಗಿದ್ದ ಕೆರೆ&ಕುಂಟೆಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ಮಾಡುವ ಮೂಲಕ ಕೆರೆಗಳ ಸ್ವರೂಪ ಹಾಳು ಮಾಡುವುದರ ಜತೆಗೆ ಹಣ ಮಾಡಲು ಕೆಲವು ಪ್ರಭಾವಿಗಳು ಮುಂದಾಗಿದ್ದರು. ಇದರ ಬಗ್ಗೆ ವಿಜಯವಾಣಿಯಲ್ಲಿ ಅ.8ರಂದು "ಮಣ್ಣು ದಂಧೆಗೆ ನಲುಗಿದ ಕೆರೆಯೊಡಲು' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ತಾಲೂಕು ಆಡಳಿತ ಕೆರೆಗಳ ರಕ್ಷಣೆಗೆ ಹಾಗೂ ಅಕ್ರಮ ಮಣ್ಣು ಸಾಗಣೆ ತಡೆಗೆ ಮುಂದಾಗಿದೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್​ ವೆಂಕಟೇಶಪ್ಪ ರಾಜಸ್ವ ನಿರೀಕ್ಷಕರ ಸಭೆ ನಡೆಸಿ, ತಾಲೂಕಿನ ಕೆರೆ&ಕುಂಟೆಗಳು ಸೇರಿ ಸರ್ಕಾರಿ ಸ್ಥಳಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಮಾರಾಟ ಮಾಡುತ್ತಿರುವುದಾಗಿ ಆರೋಪಗಳು ಕೇಳಿ ಬಂದಿವೆ. ಇದರಿಂದ ಕೆರೆಗಳ ಸ್ವರೂಪ ಹಾಳಾಗುವುದರ ಜತೆಗೆ ಅಂತರ್ಜಲಮಟ್ಟ ಕುಸಿದು ಕುಡಿಯುವ ನೀರಿಗೂ ತೊಂದರೆ ಉಂಟಾಗಬಹುದು. ಆದ್ದರಿಂದ ಆಯಾ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಮತ್ತು ಮರಳು ಸಾಗಣೆ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಚೇರಿಗೆ ವರದಿ ನೀಡುವಂತೆ ಎಲ್ಲ ರಾಜಸ್ವ ನಿರೀಕ್ಷಕರಿಗೂ ಸೂಚನೆ ನೀಡಿದರು.

ತಹಸೀಲ್ದಾರ್​ ವೆಂಕಟೇಶಪ್ಪ ಮಾತನಾಡಿ, ಕೆರೆಕುಂಟೆಗಳು ನಮಗೆ ನೀರಿನ ಮೂಲವಾಗಿದ್ದು, ಅವುಗಳನ್ನು ಅಭಿವೃದ್ಧಿ ಮಾಡಿ ರಕ್ಷಣೆ ಮಾಡಬೇಕೆ ಹೊರತು ಹಾಳು ಮಾಡಬಾರದು. ಕೆಲವರು ಕೆಟ್ಟ ಮಾರ್ಗದಲ್ಲಿ ಹಣ ಮಾಡುವ ಉದ್ದೇಶದಿಂದ ಕೆರೆಗಳಿಂದ ಮಣ್ಣು ತೆಗೆದು ಅವುಗಳ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ. ಕೆಎಲ್​ಆರ್​ 72ರ ಅಧಿನಿಯಮದಡಿ ತಹಸೀಲ್ದಾರ್​ ಮತ್ತು ಗಣಿ&ಭೂ ವಿಜ್ಞಾನ ಅಧಿಕಾರಿಗಳ ಮೂಲಕ ಕೆರೆಯಲ್ಲಿ 5 ಅಡಿ ಆಳದವರೆಗೂ ಮಣ್ಣು ತೆಗೆಯಲು ಅವಕಾಶವಿದೆ. ಜತೆಗೆ ನೀರಾವರಿ ಇಲಾಖೆಗಳ ಮೂಲಕ ಸಹ ಅನುಮತಿ ಪಡೆಯಬೇಕಿದೆ. ಯಾರಾದರೂ ನಿಯಮ ಉಲ್ಲಂನೆ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ, ಪೊಲೀಸ್​ ಮತ್ತು ನೀರಾವರಿ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ ಅಕ್ರಮ ಮಣ್ಣುಗಾರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗದುಕೊಳ್ಳಲಾಗುತ್ತದೆ ಎಂದರು.
ಉಪತಹಸೀಲ್ದಾರ್​ ಪ್ರಭಾಕರನ್​, ರಾಜಸ್ವ ನಿರೀಕ್ಷಕರಾದ ಪವನ್​, ಅಜಯ್​, ಶಿರಸ್ತೇದಾರ್​ ಮಂಜುನಾಥ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net