ಪ್ರತಿಯೊಬ್ಬರೂ ಕಾನೂನು ಗೌರವಿಸಬೇಕು: ಹಿ. ಸಿವಿಲ್ ಜಡ್ಜ್ ಚೇಂಗಟಿ

Judge programme
Published on

ಚಿಕ್ಕಮಗಳೂರು: ದೇಶದ ಸಂವಿಧಾನದಡಿ ರಚಿತವಾಗಿರುವ ಕಾನೂನನ್ನು ಪ್ರತಿಯೊಬ್ಬರೂ ಪಾಲನೆ ಮೂಲಕ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ರಾಮನಹಳ್ಳಿಯ ಪಿಟಿಎಸ್‍ಡಿಎಆರ್ ನಲ್ಲಿ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಭಾಷಾ ಸಾಮರಸ್ಯ ಪ್ರಯುಕ್ತ ನಡೆದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾತೃಭಾಷೆಯಲ್ಲಿ ಶಿಕ್ಷಣ
ವಿವಿಧತೆಯಲ್ಲಿ ಏಕತೆ ಹೊಂದಿರುವ ಏಕೈಕ ರಾಷ್ಟ್ರವಾದ ಭಾರತದಲ್ಲಿ ಜಾತಿ, ಮತ, ಧರ್ಮ ಸೇರಿದಂತೆ 150ಕ್ಕೂ ಹೆಚ್ಚು ಭಾಷೆಗಳನ್ನು ಕಾಣಬಹುದು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಕೆಲವು ಭಾಷೆಗಳನ್ನು ಸೇರಿಸಲಾಗಿದೆ. ಮನುಷ್ಯರ ನಡುವೆ ಭಾಷೆ ಸೇತುವೆಯಾಗಿ ಕೆಲಸ ನಿರ್ವಹಿಸಲಿದೆ. ಅದರಲ್ಲೂ ಮಾತೃಭಾಷೆಗೆ ತನ್ನದೇ ಆದ ಮಹತ್ವವಿದೆ ಎಂದರು.
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು ಮೊದಲ ಐದು ವರ್ಷ ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬುದು ಯೋಜನೆಯ ಪ್ರಮುಖ ಉದ್ದೇಶ. ಮಾತೃಭಾಷೆ ಪ್ರೀತಿಸಿ, ಬೇರೆ ಭಾಷೆಯನ್ನು ಗೌರವಿಸಬೇಕು ಎಂದರು.

ಮಾತೃಭಾಷೆ ಬಗ್ಗೆ ತಾತ್ಸಾರ ಬೇಡ
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್.ಶ್ರುತಿ ಮಾತನಾಡಿ, ಮಾತೃಭಾಷೆ ಬಗ್ಗೆ ತಾತ್ಸಾರ ಬೇಡ. ಅವಕಾಶ ಸಿಕ್ಕಿದಾಗ ಅವಶ್ಯವಿರುವ ಎಲ್ಲಾ ಭಾಷೆಗಳನ್ನು ಕಲಿಯಬೇಕು. ಹೊರ ರಾಜ್ಯಗಳಲ್ಲಿ ಕೆಲಸ ಮಾಡುವಾಗ ಭಾಷೆಗಳ ಕಲಿಕೆ ಅಗತ್ಯವಿದೆ ಎಂದರು.

ಕಲಿಕಾ ತರಬೇತಿಯಲ್ಲಿ ಶಿಸ್ತು, ಸಂಯಮ, ಜವಾಬ್ದಾರಿ, ಸಮಯ ಪಾಲನೆ ಎಲ್ಲರೂ ಮೈಗೂಡಿಸಿಕೊಳ್ಳಬೇಕು. ನಾವು ಮಾಡುವ ಉತ್ತಮ ಕೆಲಸಗಳು ಇನ್ನೊಬ್ಬರಿಗೆ ದಾರಿದೀಪವಾಗಿರಬೇಕು. ನಡೆ ಮತ್ತು ನುಡಿ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಎನ್.ಕೃಷ್ಣೇಗೌಡ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆ ಕುರಿತು ವಕೀಲರಾದ ಬಿ.ಎಸ್.ಮಮತ ಹಾಗೂ ಭಾಷಾ ಪರಂಪರೆ ಮತ್ತು ಭಾಷಾ ಸಾಮರಸ್ಯ ಕುರಿತು ಉಪನ್ಯಾಸಕ ಕೆ.ಆರ್.ಶಿವಕುಮಾರ್ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net