

ಶಿಕಾರಿಪುರ: ಸಮಾಜದ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸಿರುವ ಪೌರ ಕಾರ್ಮಿಕರು ಮೊದಲು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ವಡಾ ಶಿವಾನಂದ್ ಹೇಳಿದರು.
ಪೌರ ಕಾರ್ಮಿಕರ ದಿನಾಚರಣೆ ಪೂರಕವಾಗಿ ಬುಧವಾರ ಆಯೋಜಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಇಡೀ ಪಟ್ಟಣ, ನಗರ, ಮಹಾನಗರಗಳು ಸ್ವಚ್ಛವಾಗಿರಲು ಮೂಲ ಕಾರಣ ಪೌರ ಕಾರ್ಮಿಕರು. ಪರಿಶುದ್ಧ ಸೇವೆ ಸಲ್ಲಿಸುವ ಅವರು ತಮ್ಮ ಸುರಕ್ಷತೆ ಬಗ್ಗೆಯೂ ಗಮನ ನೀಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಭರತ್ ಮಾತನಾಡಿ, ಪೌರ ಕಾರ್ಮಿಕರು ಕೆಲಸ ನಿರ್ವಹಿಸುವಾಗ ತಮಗೂ ಒಂದು ಕುಟುಂಬವಿದೆ ಎಂಬುದನ್ನು ಮರೆಯಬಾರದು. ಸುರಕ್ಷತಾ ಸಲಕರಣೆಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಪೌರ ಕಾರ್ಮಿಕರು ಇಲ್ಲದಿದ್ದರೆ ಸ್ವಚ್ಛ, ಸುಂದರ ಪಟ್ಟಣ ನಿರೀಕ್ಷಿಸುವುದು ಅಸಾಧ್ಯ. ಕರೊನಾ ಸಂದರ್ಭದಲ್ಲಿ ಅವರ ಕರ್ತವ್ಯ ನಿಷ್ಠೆ, ಸೇವಾ ಭಾವವನ್ನು ಮರೆಯಬಾರದು ಎಂದರು.
ಸರ್ಕಾರಿ ಆಸ್ಪತ್ರೆಯ ಡಾ. ಮಾರುತಿ, ಹರೀಶ್, ಚಂದ್ರು, ಪುರಸಭೆಯ ರಾಜಕುಮಾರ್, ಸೈಯದ್ ನವಾಜ್, ಅರುಣ್‌ಕುಮಾರ್, ಪ್ರವೀಣ್, ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.