ಎಲ್ಲರೂ ವನ ಬೆಳೆಸುವ ಸಂಕಲ್ಪ ಮಾಡಿ

ಹಸಿರುವಳ್ಳಿ ಗ್ರಾಪಂ ವ್ಯಾಪ್ತಿಯ ಡೀಮ್ಡ್ ಅರಣ್ಯದಲ್ಲಿ ವನಮಹೋತ್ಸವದ ಅಂಗವಾಗಿ ಲೋಕಾಯುಕ್ತ ಬಿ.ಎಸ್.ಪಾಟೀಲ್ ಗಿಡನೆಟ್ಟರು. ಜಿಲ್ಲಾಧಿಕಾರಿ ಡಾ.ಶಿವಶಂಕರ್, ಸಿಇಒ ಅನುರಾಧಾ, ನೆಲಮಂಗಲ ತಹಸೀಲ್ದಾರ್ ಅಮೃತ್ ಆತ್ರೇಶ್, ಕರ್ನಾಟಕ ಲೋಕಾಯುಕ್ತ ನಿಬಂಧಕ ಎಂ.ಚಂದ್ರಶೇಖರ ರೆಡ್ಡಿ, ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಹರೀಶ್ ಇದ್ದರು.
photo tgl 1(04.09.2024) vanamahotsava
ಹಸಿರುವಳ್ಳಿ ಗ್ರಾಪಂ ವ್ಯಾಪ್ತಿಯ ಡೀಮ್ಡ್ ಅರಣ್ಯದಲ್ಲಿ ವನಮಹೋತ್ಸವದ ಅಂಗವಾಗಿ ಲೋಕಾಯುಕ್ತ ಬಿ.ಎಸ್.ಪಾಟೀಲ್ ಗಿಡನೆಟ್ಟರು. ಜಿಲ್ಲಾಧಿಕಾರಿ ಡಾ.ಶಿವಶಂಕರ್, ಸಿಇಒ ಅನುರಾಧಾ, ನೆಲಮಂಗಲ ತಹಸೀಲ್ದಾರ್ ಅಮೃತ್ ಆತ್ರೇಶ್, ಕರ್ನಾಟಕ ಲೋಕಾಯುಕ್ತ ನಿಬಂಧಕ ಎಂ.ಚಂದ್ರಶೇಖರ ರೆಡ್ಡಿ, ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಹರೀಶ್ ಇದ್ದರು.
Published on

ಲೋಕಾಯುಕ್ತ ಬಿ.ಎಸ್.ಪಾಟೀಲ್ ಹೇಳಿಕೆ - ಅರಣ್ಯ ನಾಶದಿಂದ ವನ್ಯಮೃಗ-ಮಾನವ ಸಂಘರ್ಷ

ತ್ಯಾಮಗೊಂಡ್ಲು; ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳಲ್ಲಿ ಪರಿಸರ ಬೆಳೆಸುವುದು, ಕಾಪಾಡೋದು ಮುಖ್ಯ ಕರ್ತವ್ಯವಾಗಿದೆ. ಅದರ ಜತೆ ಸಾಧ್ಯವಿರುವ ಕಡೆ ವನಬೆಳೆಸುವ ಸಂಕಲ್ಪ ಮಾಡಬೇಕು ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಹೇಳಿದರು.
ನೆಲಮಂಗಲ ತಾಲೂಕು ಹಸಿರುವಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೆನಹಳ್ಳಿ ಡೀಮ್ಡ್ ಅರಣ್ಯದಲ್ಲಿ ಕರ್ನಾಟಕ ಲೋಕಾಯುಕ್ತ, ಅರಣ್ಯ ಇಲಾಖೆ, ಬೆಂಗಳೂರು ವಕೀಲರ ಸಂಘ ಮತ್ತು ನೆಲಮಂಗಲ ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವನಮಹೋತ್ಸವ, ಪರಿಸರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಲು ಪ್ರಾರಂಭ ಮಾಡಿದ್ದ. ಆಂಗ್ಲರು ನಮ್ಮ ನಾಡಿನ ಸಂಪತ್ತನ್ನು ಲೂಟಿ ಮಾಡಲು ಪರಿಸರವನ್ನು ಯಥೇಚ್ಛವಾಗಿ ನಾಶ ಮಾಡಿದ್ದರು. ಬಹಳ ಹಿಂದೆ ಊರಿಗಿಂತ ಕಾಡೇ ಹೆಚ್ಚಿತ್ತು. ಆದರೆ, ಈಗ ನಗರೀಕರಣದ
ಹುಚ್ಚಿನಿಂದ ಅರಣ್ಯ ನಾಶವಾಗಿ ವನ್ಯಮೃಗ-ಮಾನವ ಸಂಘರ್ಷ ಏರ್ಪಟ್ಟಿದೆ. ಒಂದು ಗಿಡ ಕಡಿದರೆ ನೂರು ಗಿಡ ನೆಡುವ ಕಾನೂನಿನ ಅಗತ್ಯವಿದೆ ಎಂದು ಹೇಳಿದರು.
ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಮಾತನಾಡಿ, ನಮ್ಮ ಜೀವ ಉಳಿಯಬೇಕಾದರೆ ಪರಿಸರ ರಕ್ಷಿಸಬೇಕು. ಮಾನವ ಮತ್ತು ಪರಿಸರ ಸಮನ್ವಯತೆ ಇದ್ದರೆ ಭೂಮಂಡಲ ಉಳಿಯಲು ಸಾಧ್ಯ. ಕಾಡನ್ನು ಉಳಿಸುವ ಕೆಲಸ ಈಗ ನ್ಯಾಯಾಲಯಗಳು ಮಾಡುವ ಪರಿಸ್ಥಿತಿ ಎದುರಾಗಿದೆ. ಸಾವಿರಾರು ಎಕರೆ ಕಾಡು ಒತ್ತುವರಿ ಆಗಿದೆ ಎಂಬ ವರದಿ ಇದೆ. ಒತ್ತುವರಿ ತೆರವು ಮಾಡಿ, ಕಾಡನ್ನು ಉಳಿಸಬೇಕಾಗಿದೆ. ಅರಣ್ಯ ಭಕ್ಷಕರು ಆಧುನಿಕ ಆಯುಧಗಳನ್ನು ಹೊಂದಿದ್ದು, ಅವರನ್ನು ಎದುರಿಸಲು ರಕ್ಷಕರಿಗೂ ಆಧುನಿಕ ಆಯುಧಗಳನ್ನು ಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು. ನೆಲಮಂಗಲ ವಕೀಲರ ಸಂಘದ ಕಾರ್ಯದರ್ಶಿ ಎನ್.ಆರ್.ನಾಗೇಂದ್ರ, ಅರಣ್ಯ ಸಂರಕ್ಷಣಾಧಿಕಾರಿ ಸಿವಸಂಕರ ಸೆಂಗೋಟ್ಟುವೇಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್.ಹರ್ಷವರ್ಧನ, ಡಿವೈಎಸ್‌ಪಿ ಜಗದೀಶ್, ವೃತ್ತ ನಿರೀಕ್ಷಕ ರಂಜನ್ ಕುಮಾರ್, ಹಸಿರುವಳ್ಳಿ ಗ್ರಾಪಂ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ಅನಂತರಾಜ್, ಪಿಡಿಒ ರೇವತಿ, ಗ್ರಾಪಂ ಸದಸ್ಯ ಚನ್ನಕೃಷ್ಣ, ತಿಮ್ಮೇಗೌಡ ಇದ್ದರು.
ಪಕ್ಷಿಗಳಿಗೆ ಪೂರಕವಾದ ಮರ ಬೆಳೆಸಿ: ಪರಿಸರ ರಕ್ಷಣೆಗೆ ಕಾನೂನು ತರಲಾಗಿದೆ. ಅದನ್ನು ಅನುಷ್ಠಾನಕ್ಕೆ ತರುವವರಿಗೆ ಬದ್ಧತೆ ಇರಬೇಕು. ಸರ್ಕಾರ, ಅರಣ್ಯ ಇಲಾಖೆ ಇಂತಹ ದಿನಾಚರಣೆಗಳ ಸಂದರ್ಭದಲ್ಲಿ ಪಕ್ಷಿ ಸಂಕುಲದ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ಮರಗಳನ್ನೇ ನಂಬಿ ಬದುಕುವ ಪಕ್ಷಿಗಳನ್ನು ಉಳಿಸಲು ಅವುಗಳಿಗೆ ಆಹಾರವಾಗಬಲ್ಲ ಹಣ್ಣಿನ ಗಿಡಗಳನ್ನು ಬೆಳೆಸುವತ್ತ ಚಿಂತಿಸಬೇಕಾದ ಅಗತ್ಯ ಹೆಚ್ಚಿದೆ. ಬುದ್ಧಿಜೀವಿಯಾದ ಮನುಷ್ಯ ಇತರ ಜೀವಿಗಳೂ ಬದುಕುವ ಹಕ್ಕನ್ನು ಹೊಂದಿವೆ ಎಂಬುದನ್ನು ಅರಿತು ಬದುಕಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಕರೆ ನೀಡಿದರು.

ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ, ಪರಿಸರ ಉಳಿಯಬೇಕಾದರೆ, ಗಿಡಗಳನ್ನು ನೆಟ್ಟು ಅರಣ್ಯಗಳನ್ನು ಬೆಳೆಸಬೇಕು. ಕಾಡು ಉಳಿದರೆ ನಾಡು ಉಳಿದಂತೆ. ಗಿಡಮರ ಬೆಳೆಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ಒಂದು ವೇಳೆ ಅರಣ್ಯ ನಾಶವಾದರೆ ಅದರ ಜತೆಗೆ ಹರಿಯುವ ನದಿಯೂ ನಾಶವಾಗುತ್ತದೆ. ನದಿ ನಾಶವಾದರೆ ಕುಡಿಯುವ ನೀರೂ ಸಿಕ್ಕುವುದಿಲ್ಲ.
- ಕೆ.ಎನ್.ಫಣೀಂದ್ರ ಉಪಲೋಕಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net