ಪ್ರತಿಯೊಬ್ಬರೂ ಸಂವಿಧಾನ ಓದಲಿ

26 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತದ ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು. ವಿಶೇಷವಾಗಿ ಯುವಕರು ಸಂವಿಧಾನ ಪೀಠಿಕೆಯಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹೇಳಿದರು.

ನಗರದ ಆರ್​.ಎನ್​. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾರತ ದೇಶ ಯಾವುದೇ ರಾಜಕೀಯ ಪಕ್ಷ, ಧಮಕ್ಕೆ ಸೀಮಿತವಾಗಿಲ್ಲ. ಎಲ್ಲರಿಗೂ ಸೇರಿದ್ದಾಗಿದೆ. ಡಾ. ಬಿ.ಆರ್​.ಅಂಬೇಡ್ಕರ ರಚಿಸಿರುವ ಸಂವಿಧಾನವು ಪ್ರತಿಯೊಬ್ಬರ ಸಮಗ್ರ ಅಭಿವೃದ್ಧಿಗೆ ಮತ್ತು ಸಮಾಜದ ಹಿತಕ್ಕೆ ಪೂರಕವಾದ ಅಂಶಗಳನ್ನು ನೀಡಿದೆ. ಪ್ರತಿಯೊಬ್ಬರು ಪ್ರತಿದಿನ ಸಂವಿಧಾನ ಪೀಠಿಕೆ ಓದುಬೇಕು. ಅದರಲ್ಲಿನ ಮೌಲ್ಯಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ದೇಶದ ಇತಿಹಾಸದಲ್ಲಿ ಆ. 15 ಹಾಗೂ ಜ. 26 ಅತ್ಯಂತ ಪ್ರಮುಖ ದಿನಗಳು. ಈ ದಿನಗಳನ್ನು ರಾಷ್ಟ್ರೀಯ ಹಬ್ಬಗಳಾಗಿ ಆಚರಿಸುತ್ತೇವೆ. 1950ರ ಜ.26 ಮೂರು ಮುಖ್ಯ ಘಟನೆಗೆ ಸಾಕ್ಷಿಯಾಗಿದೆ. ಭಾರತ ದೇಶವನ್ನು ಗಣರಾಜ್ಯವೆಂದು ಘೋಷಿಸಲಾಯಿತು. ಡಾ. ಬಾಬಾಸಾಹೇಬ್​ ಅಂಬೇಡ್ಕರ್​ ರಚಿಸಿದ ಭಾರತದ ಸಂವಿಧಾನ ಜಾರಿಗೊಳಿಸಲಾಯಿತು. ಸಾರಾನಾಥದಲ್ಲಿರುವ ಅಶೋಕನ ಕಾಲದ ಸಿಂಹ ಶಿಖರ ಮತ್ತು ಸತ್ಯಮೇವ ಜಯತೆ ಅನ್ನು ರಾಷ್ಟ್ರ ಲಾಂಛನವನ್ನಾಗಿ ಮಾಡಲಾಯಿತು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ನಾಯಕರು ಮತ್ತು ನಮ್ಮ ಸಂವಿಧಾನದ ರಚನೆಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ವಿವಿಧ ಇಲಾಖೆ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶಿಸ್ತುಬದ್ಧ ಪಥಸಂಚಲನ ನಡೆಸಿ ಜನರ ಗಮನ ಸೆಳೆದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಹುಡಾ ಅಧ್ಯಕ್ಷ ಶಾಕೀರ್​ ಸನದಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯ ಎಸ್​.ಆರ್​.ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಪೊಲೀಸ್​ ಆಯುಕ್ತ ಎನ್​.ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಉಪ ಪೊಲೀಸ್​ ಆಯುಕ್ತರಾದ ರವೀಶ ಸಿ.ಆರ್​., ಮಾನಿಂಗ ನಂದಗಾವಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net