ಮಕ್ಕಳ ಆರೈಕೆ, ರಕ್ಷಣೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಿ

30adarshkdga4
Published on

ಮಡಿಕೇರಿ: ಮಕ್ಕಳ ಆರೈಕೆ ಮತ್ತು ರಕ್ಷಣೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಬಾಲನ್ಯಾಯ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಹೇಳಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಬಾಲನ್ಯಾಯ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.


ಮಕ್ಕಳ ಪಾಲನೆ ಮತ್ತು ಪೋಷಣೆಗೆ ಪಾಲಕರು ವಿಶೇಷ ಗಮನಹರಿಸಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದರ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಾಲನ್ಯಾಯ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವಂತಾಗಬೇಕು. ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.


ಬಾಲಕರ ಹಾಗೂ ಬಾಲಕಿಯರ ಮಂದಿರದಲ್ಲಿ ಇರುವ ಮಕ್ಕಳಿಗೆ ಶಿಕ್ಷಣದ ಜತೆಗೆ ಪ್ರವಾಸ ಕಾರ್ಯಕ್ರಮ ಏರ್ಪಡಿಸಿ ಅವರ ಕ್ರೀಯಾಶೀಲ ಚಟುವಟಿಕೆಗೆ ಪ್ರೋತ್ಸಾಹಿಸಬೇಕು. ಎಲ್ಲಾ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಬಾಲ್ಯ ವಿವಾಹ ತಡೆಯುವುದು ಹಾಗೂ ಮಕ್ಕಳ ಪಾಲನೆ ಮತ್ತು ಪೋಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನ ನಡೆಯಬೇಕು ಎಂದರು.


ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಮಾತನಾಡಿ, ಮಕ್ಕಳು ರಾಷ್ಟ್ರದ ಆಸ್ತಿಯಾಗಿದ್ದು, ಮಕ್ಕಳ ಪೋಷಣೆ ಮತ್ತು ಪಾಲನೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮಕ್ಕಳು ಗಲಾಟೆ ಮಾಡುತ್ತವೆ ಎಂದು ಗುದ್ದುವುದಲ್ಲ, ತಿದ್ದಬೇಕು ಎಂದು ಸಲಹೆ ನೀಡಿದರು.


ವಿವಿಧ ಇಲಾಖೆಗಳು ಮಕ್ಕಳ ಪಾಲನೆ ಮತ್ತು ಪೋಷಣೆ ಜತೆಗೆ, ಬಾಲ್ಯ ವಿವಾಹ ತಡೆಯುವಲ್ಲಿ ಸಮುದಾಯ ಜಾಗೃತಿ ಅತೀ ಮುಖ್ಯ. ಮಕ್ಕಳ ಸಂರಕ್ಷಣೆ ಮಾಡುವಲ್ಲಿ ಮಕ್ಕಳ ಜತೆ ಪ್ರತೀ ನಿತ್ಯ ಮಕ್ಕಳಂತೆ ನಾವು ಸಹ ಬೆರೆಯಬೇಕು. ಬಾಲ್ಯ ವಿವಾಹ ಸಂಬಂಧ ಯಾರೂ ಬೇಕಾದರೂ ಎಫ್‌ಐಆರ್ ದಾಖಲಿಸಬಹುದು. ಬಾಲ್ಯ ವಿವಾಹ ಒಂದು ರೀತಿ ಜೈಲು ವಿವಾಹ ಎಂಬುದನ್ನು ಮರೆಯಬಾರದು ಎಂದು ಒತ್ತಿ ಹೇಳಿದರು.


ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಮಕ್ಕಳ ರಕ್ಷಣೆ ಮತ್ತು ಪಾಲನೆ ಜತೆಗೆ ಬಾಲ್ಯ ವಿವಾಹ ತಡೆಯಲು ಮುಂದಾಗಬೇಕು ಎಂದು ಹೇಳಿದರು.


ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಬಾಲ್ಯ ವಿವಾಹ ತಡೆಯುವ ಬಗ್ಗೆ ತಹಶೀಲ್ದಾರರ ನೇತೃತ್ವದಲ್ಲಿ ನಿಯಮಾನುಸಾರ ಸಭೆ ನಡೆಸಬೇಕು. ಗ್ರಾಮ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಬಾಲ್ಯ ವಿವಾಹ ಎಂಬುದು ಕಲ್ಪನೆಯಲ್ಲಿಯೂ ಸಹ ಬರಬಾರದು ಎಂದು ಹೇಳಿದರು.


ಮಕ್ಕಳ ರಕ್ಷಣಾಧಿಕಾರಿ ಈರಸ್ವಾಮಿ ಮಾತನಾಡಿ, ಬಾಲನ್ಯಾಯ ಕಾಯ್ದೆಯಡಿ ಜಿಲ್ಲೆಯಲ್ಲಿ ೬ ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿದ್ದು, ಒಟ್ಟು ೧೧೨ ಮಕ್ಕಳು ದಾಖಲಾಗಿದ್ದಾರೆ. ವಿಶೇಷ ಪಾಲನಾ ಯೋಜನೆಯಡಿ ೧೫೩ ಮಕ್ಕಳನ್ನು ಗುರುತಿಸಲಾಗಿದೆ. ದತ್ತು ಕಾರ್ಯಕ್ರಮದಡಿ ೭ ಮಕ್ಕಳು, ಉಪಕಾರ್ ಯೋಜನೆಯಡಿ ಮಕ್ಕಳ ಶಿಕ್ಷಣಕ್ಕಾಗಿ ಅಗತ್ಯ ಕ್ರಮವಹಿಸಲಾಗಿದೆ. ಮುಖ್ಯಮಂತ್ರಿಯವರ ಬಾಲಸೇವಾ ಯೋಜನೆಯಡಿ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದ ಪೋಷಕರಿಬ್ಬರನ್ನು ಕಳೆದುಕೊಂಡ ೫ ಮಕ್ಕಳಿದ್ದು, ಇವರ ಪಾಲನೆ ಪೋಷಣೆಗೆ ಹಾಗೂ ವಿದ್ಯಾರ್ಜನೆಗೆ ಕ್ರಮವಹಿಸಲಾಗಿದೆ. ಇವರಲ್ಲಿ ಶಾಲೆಯಿಂದ ಹೊರಗುಳಿದ ಒಬ್ಬ ಇದ್ದು, ಇವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.


ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ನಾಲ್ಕು ದೂರುಗಳು ದಾಖಲಾಗಿದ್ದು, ನಾಲ್ಕು ಪ್ರಕರಣಗಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯಲ್ಲಿ ೭ ಪ್ರಕರಣಗಳು ಬಾಕಿ ಇವೆ. ೬೨ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಆದಿವಾಸಿ ಜನರು ೫೮ ಸಾವಿರ ಜನಸಂಖ್ಯೆ ಇದ್ದು, ೨೫೦ ಹಾಡಿಗಳಲ್ಲಿ ವಾಸಿಸುತ್ತಿದ್ದಾರೆ. ೧೬೧ ಹಾಡಿಗಳಲ್ಲಿ ಶೇ.೭೫ ಕ್ಕಿಂತ ಹೆಚ್ಚು ಜನರು ವಾಸಿಸುತ್ತಿದ್ದಾರೆ. ೪,೭೫೭ ಕುಟುಂಬಗಳು ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಆದಿವಾಸಿಗಳ ಅಭಿವೃದ್ಧಿಗೆ ಕಾಲೋನಿಗಳನ್ನು ನಿರ್ಮಿಸಿ, ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಗಮನ ಸೆಳೆದರು.
ಸಭೆಯಲ್ಲಿ ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸೂರಜ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಉಷಾ, ನಮಿತಾ ರಾವ್, ಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net