

ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದಿಂದ ಪಿರಿಯಾಪಟ್ಟಣ ಹಾಗೂ ಬೈಲಕುಪ್ಪೆ ಪ್ರೌಢಶಾಲೆಯಲ್ಲಿ ಗಿಡಗಳನ್ನು ನೆಟ್ಟು, ನೀರು ಹಾಕಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಯೊಬ್ಬ ನಾಗರಿಕನೂ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸಬೇಕು. ಆ ಮೂಲಕ ಪರಿಸರ ಉಳಿಸುವ ಕಾರ್ಯ ಮಾಡಬೇಕೆಂದು ತಿಳಿಸಿದ್ದರು. ಅದರಂತೆ ನಾವೆಲ್ಲರೂ ನಡೆಯಬೇಕಾಗಿದೆ. ಪರಿಸರ ದಿನವನ್ನು ಕನಿಷ್ಠ ಎರಡು ತಿಂಗಳ ಕಾಲ ಆಚರಿಸಬೇಕು. ಪ್ರತಿ ಬಿಜೆಪಿ ಕಾರ್ಯಕ್ರಮದಲ್ಲೂ ಒಂದೊಂದು ಗಿಡ ನೆಡುವುದರ ಮುಖಾಂತರ ಪರಿಸರ ಸಂರಕ್ಷಣೆ ಮಾಡುವ ಮೂಲಕ ಮೋದಿ ಅವರು ಕರೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ಮನುಷ್ಯರಾದ ನಾವೆಲ್ಲರೂ ಗಿಡ ನೆಟ್ಟು ಪರಿಸರ ಸಲಹಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ. ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಗಿಡ ನೆಟ್ಟು ಪರಿಸರ ಉಳಿಸಿಕೊಳ್ಳಬೇಕೆಂಬ ಪರಿಸರ ಸ್ನೇಹಿ ಕೆಲಸವನ್ನು ನೀವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ರಾಜೇಂದ್ರ ಮಾತನಾಡಿ, ಪರಿಸರ ಪ್ರೇಮಿಗಳಾದ ನಾವೆಲ್ಲರೂ ನಮ್ಮ ಭವಿಷ್ಯದ ಒಳಿತಿಗಾಗಿ ಪರಿಸರವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಕಾಣುವ ದಿಕ್ಕಿನಲ್ಲಿ ಹೊರಟಿದ್ದೀರಿ. ಎಲ್ಲರೂ ಪರಿಸರ ಸ್ನೇಹಿಗಳಾಗಿ ಈ ದಿನ ಒಂದೊಂದು ಗಿಡ ನೆಟ್ಟು ಪರಿಸರವನ್ನು ಪೋಷಿಸಿ ಬೆಳೆಸಿ ಎಂದು ತಿಳಿಸಿದರು.
ಟಿಬೆಟ್ ಧರ್ಮ ಗುರು ಕರ್ಮ ಮಾತನಾಡಿ, ನಾವು ಹದಿನೈದು ವರ್ಷಗಳಿಂದಲೂ ಈ ಶಾಲೆಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ನಡೆಸಿಕೊಂಡು ಬರುತ್ತಿದ್ದು ಪರಿಸರವನ್ನು ಉಳಿಸುವತ್ತ ನಾವೆಲ್ಲರೂ ಶ್ರಮ ವಹಿಸುತ್ತಿದ್ದೇವೆ. ಮಕ್ಕಳಿಗೂ ಇದರ ಬಗ್ಗೆ ಭೋಧನೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸಪ್ಪ, ರವಿ, ಪಟ್ಟಣ ಅಧ್ಯಕ್ಷ ವೆಂಕಟೇಶ್, ಕಾಲೇಜಿನ ಪ್ರಾಂಶುಪಾಲೆ ಅಂಬಿಕಾ, ಮುಖಂಡರಾದ ಲೋಕಪಾಲಯ್ಯ, ಮಲ್ಲೇಶ್, ಶೋಭಾಗೌಡ, ಚಂದ್ರೇಗೌಡ, ಬೋರೇಗೌಡ, ಮಾಗಳಿ ರವಿ ಇದ್ದರು.