ಗೋವಿನ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು; ಬಿ.ಸಿ.ನಾಗೇಶ್

10adarshkdga4
Published on

ಮಡಿಕೇರಿ: ದೇಶದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದ್ದು, ಆ ನಿಟ್ಟಿನಲ್ಲಿ ಗೋವಿನ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಜಿಲ್ಲಾ ಪ್ರಾಣಿದಯಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೆ.ನಿಡುಗಣೆ ಗ್ರಾಮದ ೮ ಎಕರೆ ಪ್ರದೇಶದಲ್ಲಿ ರೂ.೫೩ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸರ್ಕಾರಿ ಗೋ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೋ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.


ಒಂದು ಕೋಟಿ ಮೊತ್ತದ ಗೋಶಾಲೆಗಾಗಿ ರೂ.೫೩ ಲಕ್ಷ ವ್ಯಯಿಸಲಾಗಿದೆ. ಇದರಲ್ಲಿ ೫೦ ಜಾನುವಾರುಗಳನ್ನು ಕಟ್ಟಿಹಾಕಲು ಸ್ಥಳಾವಕಾಶ ಇರುವ ಶೆಡ್ ನಿರ್ಮಿಸಲಾಗಿದೆ. ಜತೆಗೆ ಭದ್ರತಾ ಸಿಬ್ಬಂದಿ, ಕಚೇರಿ ಕೊಠಡಿ, ನೀರಿನ ಟ್ಯಾಂಕ್, ಗೊಬ್ಬರದ ಗುಂಡಿಗಳನ್ನು ನಿರ್ಮಿಸಲಾಗಿದೆ ಇನ್ನುಳಿದ ಹಣವನ್ನು ಇತರೆ ಸೇವೆಗಳಿಗಾಗಿ ವ್ಯಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.


ದೇಶದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ಆ ನಿಟ್ಟಿನಲ್ಲಿ ಗೋವಿನ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಗೋವನ್ನು ಪೂಜ್ಯನೀಯ ಭಾವದಿಂದ ಕಾಣುವಂತಾಗಬೇಕು ಎಂದು ಹೇಳಿದರು.


ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಸ್ತುತ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಿಂದಲೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಗೋಶಾಲೆ ನಿರ್ಮಾಣವಾಗಿರುವ ಜಾಗವು ಗೋಮಾಳವಾಗಿರುವುದರಿಂದ ಒಟ್ಟು ೨೪ ಎಕರೆ ಜಾಗದಲ್ಲಿ ೨೧ ಎಕರೆ ಜಾಗವನ್ನು ಗೋಶಾಲೆಗೆ ನೀಡುವಂತಾಗಬೇಕು ಎಂದು ಹೇಳಿದರು.


ಮಡಿಕೇರಿ ಶಾಸಕರು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಪ್ರಸನ್ನ, ತಹಶೀಲ್ದಾರ್ ಮಹೇಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಆರ್.ಜಿ.ಸಚಿನ್, ಸಂಘ ಸಂಸ್ಥೆಯ ಮುಖಂಡರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net