ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ; ಡಿಸಿ

27adarshkdga4
Published on

ಮಡಿಕೇರಿ: ಪರಿಸರ ಸಂರಕ್ಷಣೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮನವಿ ಮಾಡಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಪಾಲುದಾರರು ಇವರ ಸಂಯುಕ್ತಾಶ್ರಯದಲ್ಲಿ ’ಪ್ರವಾಸೋದ್ಯಮದ ಪುನರಾವಲೋಕನ’ ಎಂಬ ಸಂದೇಶದೊಂದಿಗೆ ಹೋಟೆಲ್ ಲೀ ಕೂರ್ಗ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.


ಕೊಡಗು ಜಿಲ್ಲೆ ಪ್ರಾಕೃತಿಕವಾಗಿ ತನ್ನದೇ ಆದ ಸ್ಥಾನ ಹೊಂದಿದ್ದು, ಪ್ರವಾಸಿಗರನ್ನು ಹೆಚ್ಚು ಆಕರ್ಷಣೀಯಗೊಳಿಸುತ್ತದೆ. ಆ ನಿಟ್ಟಿನಲ್ಲಿ ಪ್ರವಾಸಿಗರು ಸಹ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇನ್ನಷ್ಟು ಪ್ರವಾಸಿಗರು ಭೇಟಿ ನೀಡುವಲ್ಲಿ ನಿಖರ ಮಾಹಿತಿ ಒದಗಿಸುವಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದರು.


ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವಲ್ಲಿ ಈಗಾಗಲೇ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದ್ದು, ಪ್ರತ್ಯೇಕ ವಿಶ್ವವಿದ್ಯಾನಿಲಯಕ್ಕೆ ’ಜ್ಞಾನ ಕಾವೇರಿ’ ಹೆಸರು ಇಡುವುದಕ್ಕೆ ಚಿಂತನೆ ನಡೆದಿದೆ. ಪ್ರತ್ಯೇಕ ವಿಶ್ವವಿದ್ಯಾನಿಲಯ, ಹೆಲಿ ಪೋರ್ಟ್, ಸೇರಿದಂತೆ ಹಲವು ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಪ್ರವಾಸಿಗರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿಯಂತೆ ಗ್ರೇಟರ್ ರಾಜಸೀಟು ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ. ಸದ್ಯದಲ್ಲೇ ಗ್ರೇಟರ್ ರಾಜಸೀಟು ಉದ್ಘಾಟನೆಯಾಗಲಿದೆ. ಚೇಲಾವರ, ಅಬ್ಬಿ ಜಲಪಾತ ಹೀಗೆಯೇ ಜಿಲ್ಲೆಯ ಜಲಪಾತ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವುದು, ಮತ್ತಿತರ ಕಾರ್ಯಗಳು ನಡೆಯುತ್ತಿವೆ ಎಂದರು.


ಕೊಡಗು ಜಿಲ್ಲೆಯಲ್ಲಿ ಕಾಫಿ ಟೇಬಲ್ ಬುಕ್ ಹೊರ ತರಲಾಗುತ್ತದೆ. ಖಾಸಗಿಯವರ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಎಲ್ಲರೂ ಕೈಜೋಡಿಸಬೇಕಿದೆ. ಪರಿಸರ ಸಂರಕ್ಷಣೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.


ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಡಿಕೇರಿ ನಗರ ಸ್ವಚ್ಛತೆ ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡುವಂತಾಗಬೇಕು. ಖಾಸಗಿಯವರು ಉದ್ಯಾನವನ ನಿರ್ವಹಣೆಗೆ ಮುಂದಾದಲ್ಲಿ ಅವಕಾಶ ಮಾಡಲಾಗುವುದು ಎಂದರು.


ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗು ಜಿಲ್ಲೆ ೨೦ ವರ್ಷಗಳ ಹಿಂದೆ ಪ್ರವಾಸೋದ್ಯಮದಲ್ಲಿ ಅಷ್ಟಾಗಿ ಬೆಳವಣಿಗೆ ಹೊಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದು, ೧.೫೦ ಲಕ್ಷ ಜನರು ಹೋಟೆಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಇರುವ ಉದ್ಯಾನವನಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಅವಕಾಶ ಮಾಡಬೇಕು. ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರವಾಸಿ ಮಾರ್ಗಸೂಚಿ ಫಲಕಗಳನ್ನು ಬಳಸಬೇಕು ಎಂದರು.


ಮಡಿಕೇರಿ ಶಾಸಕರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರವಾಸೋದ್ಯಮ ಅವಲಂಬಿತರ ಸಂಘದ ಅಧ್ಯಕ್ಷ ಮಂಜುನಾಥ್ ಕುಮಾರ್, ಟ್ರಾವೆಲ್ ಕೂರ್ಗ್ ಅಸೋಷಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ, ಹೋಂಸ್ಟೇ ಅಸೋಷಿಯೇಷನ್‌ನ ಮೋಂತಿ ಗಣೇಶ್, ನಾಣಿ, ಯೋಗಾನಂದ, ನವೀನ್ ಅಂಬೆಕಲ್ ಇತರರು ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು.


ಪೌರಾಯುಕ್ತ ವಿಜಯ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಯತೀಶ್ ಉಳ್ಳಾಲ್, ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ಕರ್ನಲ್ ಭರತ್, ಪ್ರವಾಸೋದ್ಯಮ ಜಿಲ್ಲಾ ಸಂಯೋಜಕ ಜತೀನ್ ಬೋಪಣ್ಣ, ಇತರರು ಇದ್ದರು.

ಸ್ಪರ್ಧಾ ವಿಜೇತರ ವಿವರ: ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಲಾಗಿದ್ದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎಸ್.ಮದನ್ ಮತ್ತು ಯತಿರಾಜು(ಪ್ರ), ಅನಿಲ್ ಎಚ್.ಟಿ. ಮತ್ತು ಶುಭ ಪಿ.ಆರ್.(ದ್ವಿ), ಶಭಾಜ್ ಆಸಿಂ ಮತ್ತು ಮಿಥುನ್ ಚಂಗಪ್ಪ(ತೃ), ವಿಡಿಯೋ ವಿಭಾಗದಲ್ಲಿ ಅನಿಲ್ ಎಚ್.ಟಿ.(ಪ್ರ), ಗೋಪಾಲ್ ಸೋಮಯ್ಯ(ದ್ವಿ), ವಿನಯ್ ಕುಮಾರ್(ತೃ). ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ರಿಷಬ್ ಪಿ.ವೈ(ಪ್ರ), ನಗರದ ಸಂತ ಜೋಸೆಫರ ಶಾಲೆಯ ಪುನೀತ್ ಎನ್.ಕೆ(ದ್ವಿ) ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net