

ಬೆಂಗಳೂರು: ಮಹದೇವಪುರ ಸೇರಿ ನಗರದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಇವರನ್ನು ಗುರುತಿಸಿ, ಬಂಧಿಸಿ, ಗಡಿಪಾರು ಪ್ರಕ್ರಿಯೆಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಕ್ಷೇತ್ರದ ರಾಮಗೊಂಡನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಭಾನುವಾರ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಆಯೋಜಿಸಲಾಗಿದ್ದ ‘ಜನ ಜಾಗೃತಿ ಅಭಿಯಾನ’ಕಾರ್ಯಕ್ರಮದಲ್ಲಿ ಮಾತನಾಡಿದರು. 2013ರಲ್ಲಿ ತೂಬರಹಳ್ಳಿಯಲ್ಲಿ ಕಸ ಸುಡುತ್ತಿದ್ದ ವೇಳೆ ಸ್ಥಳ ಪರಿಶೀಲನೆಗೆ ತೆರಳಿದಾಗ, ಅಲ್ಲಿ ನೆಲೆಸಿದವರು ಅಕ್ರಮ ಬಾಂಗ್ಲಾದೇಶಿಗರು ಎನ್ನುವುದು ಗೊತ್ತಾಗಿ ಸ್ಥಳೀಯರ, ಸರ್ಕಾರದ ಸಹಾಯದಿಂದ ಖಾಲಿ ಮಾಡಿಸಲಾಗಿತ್ತು.ಆದರೆ, ಈಗ ಮಹದೇವಪುರವೂ ಸೇರಿ ಬೆಂಗಳೂರಿನಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಆಗಮಿಸುತ್ತಾರೆ ಎನ್ನುವ ನಿರೀಕ್ಷೆ ನನಗಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಭಾರತದಾದ್ಯಂತ ಬಾಂಗ್ಲಾ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕೆಲಸವನ್ನು ತೀವ್ರಗೊಳಿಸಿದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ ಎಂದರು.
ಮೊದಲು ನನ್ನ ಮನೆ ಸ್ವಚ್ಛವಾಗಿರಬೇಕು, ಕ್ಷೇತ್ರ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಒಂದು ತಿಂಗಳಿಂದ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜನರು ಈ ಅಭಿಯಾನದಲ್ಲಿ ತೊಡಗಿದ್ದಾರೆ. ಬೆಂಗಳೂರು ನಗರ ಸೇರಿ ರಾಜ್ಯದ ಹಲವಾರು ಭಾಗಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಕ್ರಮವಾಸಿಗಳ ಗಡಿಪಾರು ಮಾಡಲು ನಿಮ್ಮೆಲ್ಲರ ಸಂಪೂರ್ಣ ಬೆಂಬಲ ಕೋರುತ್ತಿದ್ದೇವೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ದೇಶದ ಸುರಕ್ಷತೆ, ಆರ್ಥಿಕತೆಗೆ ವಲಸಿಗರು ಹೆಚ್ಚು ಅಪಾಯಕಾರಿ.ಅಕ್ರಮ ವಲಸಿಗರು ನಕಲಿ ಆಧಾರ್, ರೇಷನ್ ಕಾರ್ಡ್ ಪಡೆದು ಬಡ ಭಾರತೀಯರಿಗೆ ಸೇರಬೇಕಾದ ಸಂಪನ್ಮೂಲವನ್ನು ಲೂಟಿ ಮಾಡುತ್ತಿದ್ದಾರೆ.ಕೆಲಸ ಸಿಗದೆ ಕಳ್ಳತನ, ದರೋಡೆ ಮುಂತಾದ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಕ್ರಮವಾಗಿ ಭಾರತದಲ್ಲಿ ನೆಲೆಸಿ ಭಾರತೀಯ ಕೂಲಿ ಕಾರ್ಮಿಕರ ಕೆಲಸವನ್ನು ಕಿತ್ತುಕೊಳ್ಳುತ್ತಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಇವರನ್ನು ಪತ್ತೆ ಹಚ್ಚಿ ವಾಪಸ್ ಕಳುಹಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಮಂಜುಳಾ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಬಿ.ವಿ. ನಾಯ್ಕ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ, ನಗರ ಮಂಡಲದ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಎಚ್.ಎಸ್. ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್, ಕೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ, ಉಪಾಧ್ಯಕ್ಷ ಜಿ.ಜಯದೇವ ಸೇರಿ ನಗರ ಮಂಡಲದ ಮತ್ತು ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಮತ್ತಿತರರಿದ್ದರು.
ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ನಾಡಿನ ನೆಲ ಮತ್ತು ಜಲ ಉಳಿವಿಗಾಗಿ ಹಲವು ಹೋರಾಟ ಮಾಡಿದ್ದೇವೆ. ನಮ್ಮ ರಾಷ್ಟ್ರದ ಭದ್ರತೆ ಉದ್ದೇಶದಿಂದ ನಾವೆಲ್ಲರೂ ಒಂದಾಗಿ ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಕಾರ್ಯಕ್ಕೆ ಕೈಜೋಡಿಸಬೇಕು.
-ಕುಮಾರ ಬಂಗಾರಪ್ಪ, ಮಾಜಿ ಶಾಸಕ.