ಎಲ್ಲರಿಗಿರಲಿ ನೆಲದ ಬಹುತ್ವ ಕಾಪಾಡುವ ಬದ್ಧತೆ

HNR SAHITYA SAMMELANA
Published on

ಹೊನ್ನಾವರ: ನಮ್ಮ ನೆಲದ ಬಹುತ್ವ ಕಾಪಾಡಿಕೊಳ್ಳುವ ಬದ್ಧತೆ ಹೊಂದಿದಾಗ ಸಾಹಿತ್ಯ ಬರೆಯುವುದಕ್ಕಿಂತ ಹೆಚ್ಚಿನ ಯಶಸ್ಸು ಸಾಧಿಸಿದಂತಾಗುತ್ತದೆ ಎಂದು ಸಾಹಿತಿ ಪೊ›. ಜಯರಾಮ ಶೆಟ್ಟಿ ಹೇಳಿದರು.

ತಾಲೂಕಿನ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನೆಲದಲ್ಲಿ ಇರುವವರೆಲ್ಲರೂ ಬರೆಯಬೇಕಾಗಿಲ್ಲ. ಬರೆಯದೆಯೂ ಸಾಹಿತ್ಯದಂತೆ ನಿಜವಾಗಿ ಬದುಕುವುದಕ್ಕೆ ಸಾಧ್ಯವಾಗುತ್ತದೆ. ಅಂತಹ ಬದುಕಿಗಾಗಿ ನಾವು ಪ್ರಯತ್ನಿಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಮಕ್ಕಳಲ್ಲಿ ಓದುವ ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಸ್.ಡಿ. ಹೆಗಡೆ ಅವರು ಸಮ್ಮೇಳನಾಧ್ಯಕ್ಷ ಹೊನ್ನಪ್ಪಯ್ಯ ಗುನಗಾ ಅವರಿಗೆ ಧ್ವಜ ಹಸ್ತಾಂತರಿಸಿ ಮಾತನಾಡಿ, ಮನುಷ್ಯರು ಕೋಟಿ ಕೋಟಿ ಇದ್ದಾರೆ. ಮನುಷ್ಯತ್ವ ಎಷ್ಟು ಜನರಿಗೆ ಇದೆ ಎಂಬುದು ಮುಖ್ಯ. ಮನುಷ್ಯತ್ವ ರೂಪಿಸುವುದೇ ನಿಜವಾದ ಸಾಹಿತ್ಯವಾಗಿದೆ ಎಂದರು.

ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ದಿನಕರ ಶೆಟ್ಟಿ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದ ಶ್ರೀ ಕುಮಾರ ಸಮೂಹ ಸಂಸ್ಥೆ ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ಹಾಗೂ ಹಿರಿಯ ಪತ್ರಕರ್ತ ಜಿ.ಯು. ಭಟ್ ಮಾತನಾಡಿ, ಯಾವುದೇ ಭಾಷೆ ಕಲಿತರೂ ಮಾತೃಭಾಷೆ ಕನ್ನಡ ಬೇಕು ಎಂದರು.

ಮುಗ್ವಾ ಗ್ರಾಪಂ ಅಧ್ಯಕ್ಷ ಐ.ವಿ. ನಾಯ್ಕ, ಶ್ರೀ ಸುಬ್ರಹ್ಮಣ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ಟಿ. ಭಟ್ ಬೆಕ್ಕುತ್ತೆ, ನಿವೃತ್ತ ಪ್ರಾಚಾರ್ಯ ಎಸ್.ಜಿ. ಭಟ್ ಮಾತನಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಕೋಶಾಧ್ಯಕ್ಷ ಮುರ್ತಜಾ ಹುಸೇನ್, ತಾಪಂ ಇಒ ಚೇತನಕುಮಾರ, ಬಿಇಒ ಜಿ.ಎಸ್. ನಾಯ್ಕ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಂ.ಜಿ. ನಾಯ್ಕ, ಸತೀಶ ನಾಯ್ಕ, ಪತ್ರಕರ್ತ ಸತೀಶ ತಾಂಡೇಲ, ಇತರರಿದ್ದರು. ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ, ಗಜಾನನ ನಾಯ್ಕ, ಮಹೇಶ ಭಂಡಾರಿ ಹಾಗೂ ಬಿ.ಎನ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ತಹಸೀಲ್ದಾರ್ ಪ್ರವೀಣ ಕರಾಂಡೆ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪರಿಷತ್ ಧ್ವಜಾರೋಹಣ ಹಾಗೂ ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ ನಾಡದ್ವಜಾರೋಹಣ ನೆರವೇರಿಸಿದರು.

‘ಕವಿ ಸಮಯ’ ಕವಿಗೋಷ್ಠಿ

‘ಕವಿ ಸಮಯ’ ಕವಿಗೋಷ್ಠಿಯಲ್ಲಿ ಸಾಹಿತಿ ಜಯಶ್ರೀ ಹೆಗಡೆ ಕಣ್ಣಿ ಮಾತನಾಡಿ, ಅವರವರ ಬದುಕಿನ ಅನುಭವಗಳೇ ಕವಿತೆಯಾಗಿ ಮೂಡುತ್ತವೆ. ಕಾವ್ಯವನ್ನು ಓದಿದಾಗ, ಅಧ್ಯಯನ ಕಾವ್ಯದ ಸತ್ವ ಹೆಚ್ಚುತ್ತದೆ ಎಂದರು. ಸಾಹಿತಿ ಡಾ. ಸತೀಶ ನಾಯ್ಕ ಆಶ್ರಯ ಮಾತನಾಡಿ, ಕಾಲ ಬದಲಾದಂತೆಲ್ಲ ಕವಿಗಳ ಧೋರಣೆಗಳು ಬದಲಾಗುತ್ತ ಬಂದಿವೆ. ಉಳಿದೆಲ್ಲ ಪ್ರಕಾರಗಳಿಗಿಂತ ಕವಿತೆಯೂ ಸರಳವೂ ಮತ್ತು ಸವಾಲಿನ ಪ್ರಕಾರವಾಗಿದೆ. ಹೊಸ ತಲೆಮಾರಿನಿಂದ ಉತ್ತಮ ಕಾವ್ಯ ಹೊರ ಹೊಮ್ಮಬೇಕು ಎಂದು ತಿಳಿಸಿದರು. ಕವಿಗಳಾದ ಪಲ್ಲವಿ ನಾಯ್ಕ, ಚೈತ್ರಾ ಹೆಗಡೆ, ಮಂಜುನಾಥ ಶೆಟ್ಟಿ ತೊಳಸಾಣಿ, ಮೀನಾ ಗೌಡ, ವಿದ್ಯಾಧರ ಕಡತೋಕ, ವಿಷ್ಣು ನಾಯ್ಕ, ಸುಬ್ರಹ್ಮಣ್ಯ ಹೆಗಡೆ ಅಬ್ಳಿ, ಶ್ರೇಯಾ ಹೆಗಡೆ ಕವನ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net