

ಮೈಸೂರು: ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಹೊಸ ಡಿಜಿಟಲ್ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ತಾಂತ್ರಿಕ ಸಂಸ್ಥೆಗಳ ಕ್ಯಾಂಪಸ್‌ನ ಆರ್.ಪಿ.ಸಿಂಘಾನಿಯಾ ಸಭಾಂಗಣದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಜೆಎಸ್‌ಎಸ್ ವ್ಯವಹಾರ ಅಧ್ಯಯನ ಕೇಂದ್ರದ ವತಿಯಿಂದ ‘ಡಿಜಿಟಲ್ ಇನೋವೇಶನ್ ಆ್ಯಂಡ್ ಟ್ರಾನ್ಸ್‌ಫಾರ‌್ಮೇಷನ್ ಇನ್ ಸೌತ್‌ಈಸ್ಟ್ ಏಷ್ಯಾ’ ವಿಷಯದ ಕುರಿತು ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಮನೆಗಳಲ್ಲಿ ಸ್ಥಿರ ದೂರವಾಣಿ ಮಾತ್ರ ಇತ್ತು. ಇದೀಗ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಬಂದಿದೆ. ಕಪ್ಪು-ಬಿಳುಪು ಟಿ.ವಿ.ಯಿಂದ ಇಂಟರ್‌ನೆಟ್‌ವರೆಗೆ ಜಗತ್ತು ತಂತ್ರಜ್ಞಾನದಲ್ಲಿ ಬೆಳವಣಿಗೆ ಕಂಡಿದೆ. ಈ ಹಿಂದೆ ಬ್ಯಾಂಕುಗಳಲ್ಲಿ ವಹಿವಾಟು ನಡೆಸಲು ತಾಸುಗಟ್ಟಲೆ ಕಾಯುವ ಪರಿಸ್ಥಿತಿ ಇತ್ತು. ಇದೀಗ ಕುಳಿತ್ತಲೇ ಆ್ಯಪ್ ಮೂಲಕ ಹಣದ ವಹಿವಾಟು ನಡೆಸಬಹುದು. ಇದು ತಂತ್ರಜ್ಞಾನದಿಂದ ಸಾಧ್ಯವಾಗಿದೆ ಎಂದರು.
ಈಗಿನ ಕಾಲಮಾನವನ್ನು ಡಿಜಿಟಲ್ ಸುವರ್ಣಯುಗ ಎನ್ನಬಹುದು. ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಮನುಷ್ಯನ ಜಾಗದಲ್ಲಿ ನಿಂತು ಕೆಲಸ ಮಾಡಲು ಪ್ರಾರಂಭಿಸಿವೆ. ಈ ಕ್ಷೇತ್ರಗಳಲ್ಲಿ ಹೊಸ-ಹೊಸ ಮುಂದುವರೆದ ತಂತ್ರಜ್ಞಾನಗಳನ್ನು ಬಳಕೆ ಮಾಡಲು ಅನೇಕ ದೇಶಗಳು ಮುಂದಡಿ ಇಟ್ಟಿವೆ. ಈಗಾಗಿ ಯುವ ಸಮೂಹಕ್ಕೆ ಅದರಲ್ಲೂ ಪದವೀಧರರಿಗೆ ಹೊಸ ಅವಕಾಶಗಳು ಹೇರಳವಾಗಿ ಲಭ್ಯವಾಗಲಿವೆ. ಹಾಗಾಗಿ ವಿದ್ಯಾರ್ಥಿಗಳು ಅವಿಷ್ಕಾರದ ಜ್ಞಾನ ಮತ್ತು ಹೊಸತನ್ನು ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳಿಗೆ ಇ-ಕಚೇರಿಯನ್ನು ಅನುಷ್ಠಾನಗೊಳಿ ಸಲಾಗಿದೆ. ಇದು ರಾಜ್ಯದಲ್ಲೇ ಮೊದಲನೆಯದ್ದಾಗಿದೆ. ಈ ಸೌಲಭ್ಯದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಡಿಜಿಟಲ್ ತಂತ್ರಜ್ಞಾನದ ಮೂಲಕ ತಮ್ಮ ಕೆಲಸಗಳನ್ನು ನಿರ್ವಹಿಸಬಹುದು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ.ಸುರೇಶ್, ಮಲೇಷಿಯಾ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಕ್ಷ ಪ್ರೊ. ಪ್ರೇಮಕುಮಾರ್ ರಾಜಗೋಪಾಲ್, ಜೆಎಸ್‌ಎಸ್ ಎಸ್‌ಆ್ಯಂಡ್ ಟಿ ವಿವಿಯ ಕುಲಪತಿ ಪ್ರೊ.ಎ.ಎನ್. ಸಂತೋಷಕುಮಾರ್, ಕುಲಸಚಿವ ಡಾ.ಎಸ್.ಎ.ಧನರಾಜ್, ಎಸ್‌ಜೆಸಿಇ ಪ್ರಾಂಶುಪಾಲ ಡಾ.ಸಿ.ನಟರಾಜ್,ಡೀನ್ ಡಾ.ಪಿ. ನಾಗೇಶ್, ಜೆಎಸ್‌ಎಸ್ ಸಿಎಂಎಸ್ ಮುಖ್ಯಸ್ಥೆ ಡಾ.ಸ್ವರೂಪ ಸಿಂಹ, ಕಾರ್ಯಕ್ರಮದ ಸಂಯೋಜಕಿ ಡಾ.ಅರುಣ ಆದರ್ಶ ಹಾಗೂ ಇತರರು ಇದ್ದರು.