ಪ್ರತಿಯೊಬ್ಬರೂ ಶುದ್ಧ ನೀರು ಕುಡಿಯುವುದು ಒಳಿತು

20HDK00006
Published on

ಎಚ್.ಡಿ.ಕೋಟೆ: ಮನುಷ್ಯನ ಜೀವಿತ ಅವಧಿಯಲ್ಲಿ ನೀರು ಬಹಳ ಪಾತ್ರ ವಹಿಸಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದರು.

ತಾಲೂಕಿನ ಚಿಕ್ಕಕೆರೆಯೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಎಚ್.ಡಿ.ಕೋಟೆ ಮತ್ತು ಚಿಕ್ಕ ಕೆರೆಯೂರು ಗ್ರಾಮ ಪಂಚಾಯತಿ ಸಹಭಾಗಿತ್ವದಲ್ಲಿ ಮಂಗಳವಾರ 546ನೇ ಶುದ್ಧಗಂಗಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹುತೇಕರು ಕಲುಷಿತ ಮತ್ತು ಗಡಸು ನೀರಿನಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಕಾಣುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಕುಡಿಯುವ ನೀರು ಶುದ್ಧತೆಯಿಂದ ಕೂಡಿರಬೇಕು. ಲಕ್ಷಾಂತರ ಜನ ಬಡವರಿಗೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬಿಸಿ ಮಾದರಿಯಲ್ಲಿ ಬ್ಯಾಂಕಿಗೆ ಗ್ಯಾರಂಟಿ ನಿಂತು ಬ್ಯಾಂಕಿನಿಂದ ನೇರವಾಗಿ ಸ್ವಸಹಾಯ ಸಂಘಗಳ ಮೂಲಕ ವಾರ್ಷಿಕ ಶೇ.14 ರಷ್ಟು ಬಡ್ಡಿ ದರದಲ್ಲಿ ಯಾವುದೇ ದಾಖಲೆ, ಆಸ್ತಿ,ಅಡಮಾನಗಳಿಲ್ಲದೆ ಸಾಲ ದೊರೆಯುವಂತಾಯಿತು ಎಂದರು.

ಬ್ಯಾಂಕ್ ಬಡ್ಡಿದರದಲ್ಲಿ ಯೋಜನೆಗೆ ಬ್ಯಾಂಕ್ ನೀಡುವ ಸೇವಾ ಶುಲ್ಕ ಶೇ.5 ಒಳಗೊಂಡಿರುತ್ತದೆ. ಸಂಸ್ಥೆಗೆ ಬರುವ ಆದಾಯದಿಂದ ಸಮಾಜದಲ್ಲಿರುವ ಬಡವರು ಮತ್ತು ಸಮುದಾಯದ ಅಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳಿಗೆ ವಿನಿಯೋಗ ಮಾಡಲಾಗುತ್ತಿದೆ. ಅದೇ ರೀತಿ ನಿಮ್ಮ ಗ್ರಾಮದಲ್ಲಿ ಶುದ್ಧಗಂಗಾ ಘಟಕವನ್ನು ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ನಂತರ ಮಾತನಾಡಿದ ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ, ಆರೋಗ್ಯ ಚೆನ್ನಾಗಿದ್ದರೆ ಗಳಿಕೆ ಮತ್ತು ಉಳಿಕೆ ಮಾಡಲು ಸಾಧ್ಯ. ಅದರಂತೆ ನಾವು ಕುಡಿಯುವ ನೀರಿನ ಮಹತ್ವ ಅರಿತು ಜೀವಿಸಬೇಕು ಎಂದರು.

ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುವುದು ಒಳ್ಳೆಯದಲ್ಲ, ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತಿನಂತೆ ಜನರು ಒಂದು ಕಡೆ ಸಾಲ ಪಡೆದು ವ್ಯವಹಾರ ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಗ್ರಾಮಕ್ಕೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಸಹಾಯಧನ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಜಿಲ್ಲಾ ಹಿರಿಯ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ, ತಾಲೂಕು ಯೋಜನಾಧಿಕಾರಿ ವಿ. ಭಾಸ್ಕರ್, ಕೃಷಿ ಮೇಲ್ವಿಚಾರಕ ರಾಜು ಬಿ.ಜೆ., ವಲಯ ಮೇಲ್ವಿಚಾರಕಿ ಪವಿತ್ರ, ಶುದ್ಧಗಂಗಾ ಘಟಕದ ಮೇಲ್ವಿಚಾರಕ ಸುನಿಲ್, ಚಿಕ್ಕಕೆರೆಯೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್, ಸದಸ್ಯರಾದ ಮಹೇಶ್, ಚಲುವರಾಜು, ರಮೇಶ್, ಸಣ್ಣಸ್ವಾಮಿ ನಾಯಕ, ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ನಾಗರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಸೇವಾ ಪ್ರತಿನಿಧಿ ರೇಖಾ, ಪವಿತ್ರ, ಶೈಲೇಂದ್ರ, ಮಹೇಶ್, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net