

ಶಿವಮೊಗ್ಗ: ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಜಂತುಹುಳು ಕುಂಠಿತಗೊಳಿಸುತ್ತಿದ್ದು ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದ ಎಲ್ಲ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳುವ ಮೂಲಕ ಜಂತುಹುಳು ನಿವಾರಣೆಗೆ ಸಹಕರಿಸಬೇಕು ಎಂದು ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ಕರೆ ನೀಡಿದರು.
ಮಕ್ಕಳೆಲ್ಲ ಇಂದು ಜಂತುಹುಳು ನಿವಾರಣಾ ಮಾತ್ರೆ ಆಲ್ಬೆಂಡಜೋಲ್ ಅನ್ನು ಶಿಕ್ಷಕರಿಂದ ಪಡೆದು, ಜಗಿದು ನುಂಗಬೇಕು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ(ಪುಡಿಮಾಡಿ) ಮತ್ತು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ಜಗಿದು ನುಂಗಲು ಶಿಕ್ಷಕರು ನೀಡಬೇಕು. ಈ ಹಿಂದೆ ಜಂತು ಹುಳು ಮಾತ್ರೆಯನ್ನು ತೆಗೆದುಕೊಂಡಿದ್ದರೂ ಪಲ್ಸ್ ಪೋಲಿಯೋ ಮಾದರಿಯಲ್ಲಿ ಎಲ್ಲ ಮಕ್ಕಳು ಮಾತ್ರೆಯನ್ನು ತಗೆದುಕೊಳ್ಳಬೇಕು. ಮಾತ್ರೆಯನ್ನು ಜಗಿದು ನುಂಗಬೇಕು ಎಂದರು.
ಜಂತು ಹುಳು ಸೋಂಕಿನಿಂದ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ವಾಂತಿ, ನಿಶಕ್ತಿ, ಅತಿಸಾರ, ಓದಿನಲ್ಲಿ ಏಕಾಗ್ರತೆ ಕೊರತೆ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.
ರೋಟರಿ ಪೂರ್ವ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಚಂದ್ರಶೇಖರಯ್ಯ ಮಾತನಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಡಿಎಲ್ಒ ಡಾ. ಕಿರಣ್, ಆರ್‌ಸಿಎಚ್ ಅಧಿಕಾರಿ ಡಾ. ಒ.ಮಲ್ಲಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಟಿಎಚ್‌ಒ ಡಾ.ಚಂದ್ರಶೇಖರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ರೋಟರಿ ಪೂರ್ವ ಖಜಾಂಚಿ ವಿಜಯಕುಮಾರ್, ರೋಟರಿ ಪೂರ್ವ ಇಂಗ್ಲಿಷ್ ಶಾಲೆಯ ಪ್ರಾಚಾರ್ಯ ಸೂರ್ಯನಾರಾಯಣ, ರೋಟರಿ ಪೂರ್ವ ಶಿಕ್ಷಣ ಕಾರ್ಯದರ್ಶಿ ಎಸ್.ವಿ.ರಾಮಚಂದ್ರ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಜರಿದ್ದರು.