ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಎಲ್ಲರೂ ಸಹಕರಿಸಿ: ಡಾ.ನಂಜುಂಡೇಗೌಡ

MDK15
Published on

ಮಡಿಕೇರಿ: ನಾಡಿನ ಜೀವನದಿ ’ಕಾವೇರಿ ನದಿ’ ಉಗಮ ಸ್ಥಾನ ತಲಕಾವೇರಿಯಲ್ಲಿ ಅ೧೭ ರಂದು ರಾತ್ರಿ ೭ ಗಂಟೆ ೨೧ ನಿಮಿಷಕ್ಕೆ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಪವಿತ್ರ ತೀರ್ಥೋದ್ಭವ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಕೋರಿದರು.


ಭಾಗಮಂಡಲದ ಮುಡಿಶೆಡ್ ಕಟ್ಟಡದಲ್ಲಿ ಮಂಗಳವಾರ ಆಯೋಜಿಸಿದ್ದ ಪವಿತ್ರ ’ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವ ಸಂಬಂಧ ವಿವಿಧ ಇಲಾಖೆಗಳು ಕೈಗೊಂಡಿರುವ ಅಗತ್ಯ ಸಿದ್ಧತೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಲಹೆ, ಸೂಚನೆ, ಅಭಿಪ್ರಾಯ ಪಡೆದು ಅವರು ಮಾತನಾಡಿದರು.


ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಭದ್ರತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು. ಭಕ್ತಾದಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ತೀರ್ಥೋದ್ಭವ ಸಂದರ್ಭದಲ್ಲಿ ಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಪೂಜಾ ಪದ್ಧತಿಯಲ್ಲಿ ಯಾವುದೇ ಗೊಂದಲವಿಲ್ಲದೆ ಈ ಹಿಂದೆ ಆಚರಿಸಿಕೊಂಡು ಬಂದ ರೀತಿಯಲ್ಲಿ ಈ ಬಾರಿಯೂ ನಡೆಸಿಕೊಂಡು ಹೋಗಲಾಗುತ್ತದೆ ಎಂದು ಹೇಳಿದರು.


ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಮಾತನಾಡಿ, ಸಂಚಾರ ವ್ಯವಸ್ಥೆಗೆ ಯಾವುದೇ ರೀತಿ ಅಡಚಣೆಯಾಗದ ರೀತಿಯಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ವಾಹನ ನಿಲುಗಡೆ ಹಾಗೂ ಕುಂಡಿಕೆಯ ಸುತ್ತಮುತ್ತಲು ಮುಂಜಾಗ್ರತೆ ಕ್ರಮ ವಹಿಸಲಾಗುವುದು ಎಂದರು.


ಕಳೆದ ಎರಡು ವ?ರ್ ಭಕ್ತಾದಿಗಳ ಸಂಖ್ಯೆ ಕೊಂಚ ಕಡಿಮೆ ಇತ್ತು. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.


ತೀರ್ಥೋದ್ಭವ ಸಂದರ್ಭದಲ್ಲಿ ಸೂಕ್ತ ಭದ್ರತೆಯನ್ನು ನೀಡಲಾಗುವುದು. ಕಾವೇರಿ ತುಲಾ ಸಂಕ್ರಮಣ ಸಂದರ್ಭದಲ್ಲಿ ಸ್ಥಳೀಯರ ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜೊತೆಗೆ ಕೈ ಜೋಡಿಸುವಂತೆ ತಿಳಿಸಿದರು.


ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚಯ್ಯ ಮಾತನಾಡಿ, ಸ್ಥಳೀಯ ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಪುರಾತನ ಕಾಲದಿಂದ ನಡೆದುಕೊಂಡು ಬರುತ್ತಿರುವ ಆಚಾರ-ವಿಚಾರ, ಸಂಪ್ರದಾಯಗಳನ್ನು ಮುಂದೆಯೂ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.


ಜನರ ಭಕ್ತಿ ಭಾವನೆಗಳನ್ನು ಅರಿತು ಅದನ್ನು ಗೌರವಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪವಿತ್ರ ಕುಂಡಿಕೆಯಲ್ಲಿ ತೀರ್ಥಸ್ನಾನ ಮಾಡಲು ಅವಕಾಶ ಮಾಡಿಕೊಡಬೇಕು. ತೀರ್ಥೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯಾದ ಅಡೆತಡೆ ಉಂಟಾಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ತಿಳಿಸಿದರು.


ಎಂ.ಬಿ.ದೇವಯ್ಯ ಮಾತನಾಡಿ, ಯುಗ ಯುಗಾಂತರದಿಂದಲೂ ಪವಿತ್ರ ಕುಂಡಿಕೆಯಲ್ಲಿ ತೀರ್ಥಸ್ಥಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.


ಮನು ಮುತ್ತಪ್ಪ ಮಾತನಾಡಿ, ಹಿಂದಿನ ಕಾಲದಿಂದ ನಡೆದುಕೊಂಡು ಬರುತ್ತಿರುವ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಬೇಕು. ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರಧಾನ ಮಾಡಿದ ಭಕ್ತಾಧಿಗಳಿಗೆ ಪವಿತ್ರ ಕೊಳಕ್ಕೆ ತೆರಳಲು ಅವಕಾಶ ಮಾಡಬೇಕು ಎಂದು ಕೋರಿದರು.


ಸ್ಥಳೀಯರು ಮಾತನಾಡಿ, ಕುಂಡಿಕೆಯ ಬಳಿ ಅವಶ್ಯಕತೆಗೆ ಅನುಗುಣವಾಗಿ ಅರ್ಚಕರನ್ನು ನೇಮಿಸುವಂತಾಗಬೇಕು. ಸಾಂಪ್ರದಾಯಿಕ ಉಡುಪಿನಲ್ಲಿರುವವರಿಗೆ ಕುಂಡಿಕೆಯ ಬಳಿ ಅವಕಾಶ ನೀಡಬೇಕು. ವಾಹನ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ಅಡೆತಡೆ ಉಂಟಾಗಬಾರದು. ಜೊತೆಗೆ ಸೂಕ್ತ ಪಾಕಿರ್ಂಗ್ ವ್ಯವಸ್ಥೆಯನ್ನು ಕಲ್ಪಿಸುವಂತಾಗಬೇಕು. ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಹಿಂದಿನ ಸಾಂಪ್ರದಾಯಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡುವಂತಾಗಬೇಕು. ತಲಕಾವೇರಿಗೆ ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತಾಗಬೇಕು ಎಂದರು.


ಭಾಗಮಂಡಲ ಗ್ರಾ.ಪಂ ಉಪಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ರಸ್ತೆ ಬದಿಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಜತೆಗೆ ಸ್ವಚ್ಛತೆ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹೀಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.


ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕಿ ಗೀತಾ ಮಾತನಾಡಿ, ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕ್ರಮವಹಿಸಲಾಗುವುದು ಎಂದರು.


ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ ಗಾಳಿ, ಮಳೆಗೆ ಬಿದ್ದ ಮರಗಳನ್ನು ತೆರವು ಮಾಡಿಸಲಾಗುತ್ತಿದೆ. ತೀರ್ಥೋದ್ಭವ ಸಂದರ್ಭದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.


ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಎ.ಅಯ್ಯಪ್ಪ, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಪೆಮಿತ, ತಹಶೀಲ್ದಾರ್ ಮಹೇಶ್, ತಾ.ಪಂ.ಇಒ ಶೇಖರ್, ದೇವಾಲಯದ ಇಒ ಕೃಷ್ಣಪ್ಪ, ತಕ್ಕ ಮುಖ್ಯಸ್ಥರು, ಅರ್ಚಕರು, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.


ರಸ್ತೆ ಬದಿಯಲ್ಲಿ ಬೆಳೆದಿರುವ ಕಾಡುಗಳನ್ನು ಕತ್ತರಿಸಲಾಗಿದೆ. ಸಂಚಾರಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ. ಸಂಚಾರಕ್ಕೆ ಯಾವುದೇ ಅಡೆಚಣೆ ಉಂಟಾಗುವುದಿಲ್ಲ.
ನಾಗರಾಜ, ಇಇ, ಲೋಕೋಪಯೋಗಿ ಇಲಾಖೆ


ಭಾಗಮಂಡಲ ಫೀಡರ್‌ನಿಂದ ಭಾಗಮಂಡಲ ದೇವಸ್ಥಾನಕ್ಕೆ ವಿದ್ಯುತ್ ಸೇವೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕ್ರಮವಹಿಸಲಾಗುವುದು.
ಅನಿತಾ ಬಾಯಿ, ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್


ಆರೋಗ್ಯ ಇಲಾಖೆ ವತಿಯಿಂದ ತಲಕಾವೇರಿಯಲ್ಲಿ ತಾತ್ಕಾಲಿಕ ಚಿಕಿತ್ಸಾ ಘಟಕ ತೆರೆಯಲಾಗುವುದು. ಜತೆಗೆ ತುರ್ತು ಚಿಕಿತ್ಸಾ ಘಟಕವನ್ನು ಕೂಡ ತೆರೆದು ದಿನದ ೨೪ ಗಂಟೆ ಸೇವೆ ನೀಡಲಾಗುವುದು. ಈ ಭಾಗದ ಕುಡಿಯುವ ನೀರಿನ ಮೂಲವನ್ನು ಸಂಶೋಧನೆಗೆ ತೆಗೆದುಕೊಂಡು ಹೋಗಲಾಗಿದೆ. ಜತೆಗೆ ಅಂಗಡಿ ಹೋಟೆಲ್‌ಗಳ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ತರಬೇತಿ ಕೂಡ ನೀಡಲಾಗಿದೆ.
ಡಾ.ಚೇತನ್, ಮಡಿಕೇರಿ ತಾಲೂಕು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net