

ಹೊಳೆನರಸೀಪುರ : ಗ್ರಾಮೀಣ ಭಾಗದ ಜನರು ತಮ್ಮ ಗ್ರಾಮದ ಪರಿಸರವನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ದೊಡ್ಡಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಕಾರಿ ಈಶ್ವರ ಬೆನಕಟ್ಟಿ ಹೇಳಿದರು.
ತಾಲೂಕಿನ ದೊಡ್ಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಳ್ಳಿ ಹಾಗೂ ದೊಡ್ಡಳ್ಳಿ ಕೊಪ್ಪಲು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಒಂದು ವಾರಗಳಿಂದ ಹಳ್ಳಿಗಳನ್ನು ಸ್ವಚ್ಛ ಮಾಡುವಲ್ಲಿ ನಿರತರಾಗಿದ್ದೇವೆ. ಸಾರ್ವಜನಿಕರು ತಮ್ಮ ಗ್ರಾಮಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಅರಿವು ಮೂಡಿಸಿದ್ದೇವೆ. ಗ್ರಾಮದೊಳಗಡೆ ತಿಪ್ಪೆ ಗುಂಡಿಗಳನ್ನು ಮಾಡಿಕೊಳ್ಳಬಾರದು. ತ್ಯಾಜ್ಯ ವಸ್ತುಗಳನ್ನು ಹರಡದಂತೆ ಎಚ್ಚರಿಕೆ ವಹಿಸಬೇಕು. ಚರಂಡಿಗಳಲ್ಲಿ ಹಾಗೂ ಇತರೆ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಹೆಚ್ಚಾಗುವಂತಾಗುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅದರಿಂದ ಎಚ್ಚರಿಕೆ ವಹಿಸಬೇಕು ಎಂದರು ಸಲಹೆ ನೀಡಿದರು.
ಕಳೆದ 20 ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಸಾರ್ವಜನಿಕರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು. ದೊಡ್ಡಹಳ್ಳಿ ಗ್ರಾಮದಲ್ಲಿ ಶಂಕಿತ ಡೆಂೆ ಜ್ವರಕ್ಕೆ ಹತ್ತಾರು ಮಕ್ಕಳು ಹಾಗೂ ಹಲವು ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕಳುಹಿಸಿದ್ದೇವೆ. ಹಾಗಾಗಿ ಗ್ರಾಮದ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಬಿತ್ತಿ ಪತ್ರಗಳನ್ನ ವಿತರಿಸುವ ಮೂಲಕ ಹಾಗೂ ಮನೆ ಮನೆಗೆ ಭೇಟಿ ನೀಡಿ ತಿಳುವಳಿಕೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಶಂಕಿತ ಡೆಂೆ ಜ್ವರಕ್ಕೆ ಎರಡು ಮಕ್ಕಳು ಬಲಿಯಾದರು. ಈ ಘಟನೆ ಗ್ರಾಮದ ಜನತೆಗೆ ಆತಂಕವನ್ನುಂಟು ಮಾಡಿತು. ತಹಸೀಲ್ದಾರ್, ತಾಲೂಕು ಆರೋಗ್ಯ ಅಕಾರಿ ಮತ್ತು ಅವರ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ತುರ್ತು ಕ್ರಮಗಳನ್ನು ಕೈಗೊಂಡಿದ್ದರು. ಇನ್ನೂ ಕೂಡ ಈ ಸಮಸ್ಯೆಯಿಂದ ಗ್ರಾಮದ ಜನತೆ ಹೊರ ಬಂದಿಲ್ಲ. ಗ್ರಾಮದ ಜನರು ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.