

ನಾಪೋಕ್ಲು: ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಭಾರತೀಯ ಸೇನೆಯ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಮೈಸೂರಿನ ಕೊಡಗು ಗೌಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ ಹೇಳಿದರು.
ಮೈಸೂರಿನ ಕೊಡಗು ಗೌಡ ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೊಸ ವರ್ಷಾಚರಣೆ ಹಾಗೂ ಸಂತೋಷ ಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಅಗ್ನಿವೀರ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಸೈನಿಕರಾಗಿ ದೇಶ ಸೇವೆಯಲ್ಲಿ ತೊಡಗುವ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದೇಶಭಕ್ತಿ ಮೂಡಿಸುವ, ಹಾಗೂ ಸೈನಿಕರ ತ್ಯಾಗ ಬಲಿದಾನ ಗಳಿಗೆ ಸಂಬಂದಿಸಿದ ಮನಮಿಡಿಯುವ ಹಾಡು ಮತ್ತು ನೃತ್ಯಗಳನ್ನು ಪ್ರಸ್ತುತ ಪಡಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯರನ್ನು ಹಾಗೂ ಇತ್ತೀಚೆಗೆ ನಿವೃತ್ತಿ ಹೊಂದಿದ ಯೋಧರನ್ನು ಸನ್ಮಾನಿಸಲಾಯಿತು. ಅಲ್ಲದೆ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಯೋಧರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಸ್ಥಾಪಕ ಅಧ್ಯಕ್ಷ ತಡಿಯಪ್ಪನ ಕುಮಾರಜಯ, ಮೈಸೂರು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ, ಮಾಜಿ ಅಧ್ಯಕ್ಷ ತೊಟ್ಯಾಂಬೈಲು ಮನೋಹರ್, ಕುದುಪಜೆ ಕುಶಾಲಪ್ಪ, ಕುಯ್ಯುಮುಡಿ ರಾಮಪ್ಪ, ಪೊನ್ನಚನ ಅಪ್ಪಯ್ಯ, ನಡುವಟ್ಟಿರ ಗೀತ ಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಕರ್ಣಯ್ಯನ ಮನೋಹರ್ ಸ್ವಾಗತಿಸಿದರೆ, ಉಪನ್ಯಾಸಕ ಪಟ್ಟಡ ಶಿವಕುಮಾರ್ ಮತ್ತು ಚಪ್ಪೆರಾ ಯಮುನಾ ಕಾರ್ಯಕ್ರಮ ನಿರೂಪಿಸಿ, ಶಂಕರನ ದೇವಯ್ಯ ವಂದಿಸಿದರು.