

ವಿಜಯಪುರ: ಕಾನೂನಿನ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಗ್ರಾಮ ಮಟ್ಟಗಳಲ್ಲಿ ಶಿಬಿರಗಳನ್ನು ಏರ್ಪಡಿಸಬೇಕು. ಆ ಮೂಲಕ ಉಚಿತ ಕಾನೂನು ಸೇವೆಗಳು ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ ಎ. ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನ್ಯಾಯವನ್ನು ಸಬಲೀಕರಣಗೊಳಿಸುವುದು ಮತ್ತು ಕಾನೂನು ಸೇವೆಗಳಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ’ ವಿಷಯದ ಕುರಿತ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನ ಅವಕಾಶಗಳ ಆಧಾರದ ಮೇಲೆ ನ್ಯಾಯವನ್ನು ನಿರ್ದಿಷ್ಟವಾಗಿ, ಸೂಕ್ತವಾದ ಕಾನೂನು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಉಚಿತ ಕಾನೂನು ಸಹಾಯ ಸಲಹೆಗಳನ್ನು ನೀಡುವಂತಾಗಬೇಕು ಎಂದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಮಾತನಾಡಿ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳು, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆಯ ಕೆಲಸಗಾರರು, ಗುಂಪು ಘರ್ಷಣೆ, ಹಿಂಸಾಚಾರ, ಪ್ರವಾಹ, ಅನಾವೃಷ್ಟಿ, ಭೂಕಂಪ, ಕೈಗಾರಿಕಾ ನಾಶ ಇತ್ಯಾದಿಗಳ ಬಲಿಪಶು, ಕೋಮು ಘರ್ಷಣೆಗೆ ಬಲಿಯಾದವರು, ಮಾನಸಿಕ ಅಥವಾ ಇತರ ಯಾವುದೇ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳು, ಸಂರಕ್ಷಣಾ ಮನೆ, ಮಾನಸಿಕ ಆಸ್ಪತ್ರೆ ಇತ್ಯಾದಿಗಳ ವಶದಲ್ಲಿರುವ ವ್ಯಕ್ತಿಗಳು, ಬಂಧಿತ ಕಾರ್ಮಿಕರು ಮತ್ತು ಮಾನವ ಕಳ್ಳಸಾಗಣೆಯ ಬಲಿಪಶುಗಳು, ಎಲ್ಲ ವರ್ಗದ ವ್ಯಕ್ತಿಗಳು ಉಚಿತ ಕಾನೂನು ಸಹಾಯಕ್ಕೆ ಅರ್ಹರಾಗಿರುತ್ತಾರೆ. ಕಾನೂನು ಸೇವಾ ಪ್ರಾಧಿಕಾರವು ಕಾನೂನು ಅರಿವು, ಕಾನೂನು ನೆರವು ಮತ್ತು ವಿವಾದಗಳ ಇತ್ಯರ್ಥವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಲೋಕ ಅದಾಲತ್, ರಾಜಿ ಸಂಧಾನ ಹಾಗೂ ಮಧ್ಯಸ್ಥಿಕೆಯಿಂದ ಕಾನೂನಿನ ಪರಿಹಾರ ಕಂಡುಕೊಳ್ಳುವುದು ಪ್ರಾಧಿಕಾರದ ಮುಖ್ಯ ಉದ್ದೇಶ ಮತ್ತು ಕಾರ್ಯಗಳಾಗಿವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಮಕ್ಕಳಂತಹ ಸಮಾಜದ ದುರ್ಬಲ ವರ್ಗಗಳನ್ನು ತಲುಪಲು ವಿವಿಧ ಕಾರ್ಯಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಕಾನೂನು ಅಭ್ಯಸಿಸುವ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಬಂದಿದ್ದು ವಿದ್ಯಾರ್ಥಿಗಳು ಗುಂಪುಗಳನ್ನು ರಚಿಸಿಕೊಂಡು ಪ್ರತಿಯೊಂದು ಗ್ರಾಮಗಳಿಗೂ ತೆರಳಿ ಈ ಕಾನೂನುನಿನ ಕುರಿತು ಸಮಗ್ರವಾಗಿ ಮಾಹಿತಿ ನೀಡಬೇಕು. ನಾಲ್ಕೈದು ಗ್ರಾಮಗಳ ಸಾರ್ವಜನಿಕರನ್ನು ಒಂದುಗೂಡಿಸಿ ಅಹವಾಲುಗಳನ್ನು ಆಲಿಸಬೇಕು. ಕಾನೂನಿನ ಅರಿವು ಮೂಡಿಸುವುದರೊಂದಿಗೆ ವಿವಿಧ ಇಲಾಖೆಗಳ ಸೌಲಭ್ಯ ವಂಚಿತರ ಸಾರ್ವಜನಿಕರ ದೂರಿನ ಅನಸಾರ ಸೂಕ್ತ ಪರಿಹಾರ ದೊರಕುವಂತೆ ದೂರು ಪ್ರಾಧಿಕಾರದ ಗಮನಕ್ಕೆ ತರಬೇಕು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಶೀಘ್ರವಾಗಿ ಸಮಸ್ಯಗಳನ್ನು ಬಗೆಹರಿಸುವಂತೆ ನೋಡಿಕೊಳ್ಳಬೇಕು ಎಂದರು.
ಮಂಗಳೂರಿನ ಕಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರು ಹಾಗೂ ಜಿಲ್ಲಾ ನ್ಯಾಯಾಧೀಶ ಜೈ ಶಂಕರ ಮಾತನಾಡಿ, ಕಾನೂನಿನ ಸೇವೆಗಳು ಹಾಗೂ ಅವಶ್ಯಕತೆ ಬಯಸಿದವರಲ್ಲಿಗೆ ತೆರಳಿ ಅವರುಗಳ ಸಮಸ್ಯೆಗಳಿಗೆ ಸ್ಪಂದಿಸುವುದೇ ಈ ಕಾನೂನಿನ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿಯೇ ಇರುವುದಿಲ್ಲ. ಈ ಕುರಿತು ತಾವು ವಿದ್ಯಾರ್ಥಿಗಳ ದಿಸೆಯಲ್ಲಿ ಪ್ರತಿಯೊಂದು ಯೋಜನೆಗಳ ಸಾರ್ವಜನಿಕರಲ್ಲಿ ಸಮರ್ಪಕವಾಗಿ ಯೋಜನೆಗಳ ಮಾಹಿತಿ ಹಾಗೂ ಎಲ್ಲ ಯೊಜನೆಗಳು ಲಾಭ ದೊರಕುವಂತಾಗಬೇಕು. ಅದರೊಂದಿಗೆ ಸಮಗ್ರವಾಗಿ ಕಾನೂನಿನ ನೆರವು ಹಾಗೂ ಅರಿವು ಮೂಡಿಸುವಂತಾಗಬೇಕು ಎಂದರು.
ಡಿಎಚ್‌ಒ ಸಂಪತ್ ಗುಣಾರಿ ಮಾತನಾಡಿದರು.
ಎಡಿಸಿ ಸೋಮನಿಂಗ ಗೆಣ್ಣೂರ, ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ, ಎಎಸ್‌ಪಿ ರಾಮನಗೌಡ ಹಟ್ಟಿ, ಜಿಪಂ ಉಪ ಕಾರ್ಯದರ್ಶಿ ಸಿ.ಬಿ. ಕುಂಬಾರ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಬಿ. ಬಿರಾದಾರ ಮತ್ತಿತರರಿದ್ದಾರೆ.
ಶ್ರೀ ಸಿದ್ಧ್ದಸಿರಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಸುಷ್ಮಾ ದೇಸಾಯಿ ಸ್ವಾಗತಿಸಿದರು. ಪ್ರಾಂಶುಪಾಲ ಆರ್.ಎಸ್. ಸಂಜೆವಾಡಮಠ ವಂದಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬಿಎಲ್‌ಡಿಇ ಕಾನೂನು ಶಾಲೆ, ಅಂಜುಮನ್ ಕಾನೂನು ಮಹಾವಿದ್ಯಾಲಯ, ಸಿದ್ಧೇಶ್ವರ ಕಾನೂನು ಮಹಾವಿದ್ಯಾಲಯ, ಸಿದ್ಧಸಿರಿ ಕಾನೂನು ಮಹಾವಿದ್ಯಾಲಯ, ಸಿಕ್ಯಾಬ್ ಕಾನೂನು ಮಹಾವಿದ್ಯಾಲಯ, ಎಎಸ್‌ಎನ್ ಕಾನೂನು ಮಹಾವಿದ್ಯಾಲಯ ನಾಲತವಾಡ, ರಹೆಮತ್ ಬಿ.ಎ. ಸಿರಸಗಿ ಮೆಮೊರಿಯಲ್ ಕಾನೂನು ಮಹಾವಿದ್ಯಾಲಯ ಕಲಕೇರಿ, ಮಾತೋಶ್ರೀ ಕಮಲಾಬಾಯಿ ಸಿದ್ದಪ್ಪ ಕರಜಗಿ ಕಾನೂನು ಮಹಾವಿದ್ಯಾಲಯ ತಾಳಿಕೋಟಿ ಹಾಗೂ ಟಿಎಸ್‌ಪಿ ಮಂಡಳಿ ಕಾನೂನು ಮಹಾವಿದ್ಯಾಲಯ ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ನಡೆಯಿತು.