

ಹನೂರು: ದೇಶಕ್ಕೆ ಸಂವಿಧಾನ ನೀಡುವಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪಾತ್ರ ಅಪಾರ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನದ ಆಶಯವನ್ನು ಪಾಲಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರೃಕ್ಕೂ ಮುನ್ನ ದೇಶದ ಸಂಸ್ಥಾನಗಳನ್ನು ಇಂಗ್ಲೀಷರು ಹಾಗೂ ರಾಜರು ಆಳ್ವಿಕೆ ನಡೆಸುತ್ತಿದ್ದರು. ಆದರೆ, ದೇಶ ಸ್ವಾತಂತ್ರೃಪಡೆದ ನಂತರ ತನ್ನದೆ ಆದ ಸ್ವಾಯತ್ತತೆಯನ್ನು ಪಡೆದುಕೊಂಡಿತು. ಬಳಿಕ ಸಂವಿಧಾನ ರಚನಾ ಸಮಿತಿಯ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಅವರು 1950 ಜ.26ರಂದು ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು, ವಿಶ್ವಕ್ಕೆ ಬೃಹತ್ ಹಾಗೂ ಲಿಖಿತ ಸಂವಿಧಾನವಾಗಿದೆ. ಈ ಮೂಲಕ ದೇಶವು ಗಣತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೂಲಕ ಆಡಳಿತ ನಡೆಸುತ್ತಿದೆ. ಗಣತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ಸ್ಫೂರ್ತಿದಾಯಕವಾಗಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಿದೆ. ದೇಶದಲ್ಲಿನ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವೆನಿಸಿದ್ದು, ಇಲ್ಲಿನ ಕೆಲವು ಅಂಶಗಳನ್ನು ಇತರೆ ದೇಶಗಳು ಕೂಡ ಅನುಸರಿಸುತ್ತಿರುವುದು ಹೆಮ್ಮೆಯ ಸಂಗತಿ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ಪಾಲಿಸಬೇಕು. ಹಾಗೆಯೇ ಮಹಾನ್ ನಾಯಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಿರುದ್ಯೋಗವನ್ನು ಹೊಗಲಾಡಿಸಲು ಪಣ: ಹನೂರು ತಾಲೂಕು ತೀರ ಹಿಂದುಳಿದಿದ್ದು, ಜನರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ. ತಾಲೂಕು ರಚನೆಯಾಗಿದ್ದರೂ ವಿವಿಧ ಇಲಾಖೆಯ ಕಚೇರಿಗಳಿಲ್ಲ. ಆರೋಗ್ಯ ಸೇವೆ ಸಮರ್ಪಕವಾಗಿಲ್ಲ. ರಸ್ತೆಗಳು ಹದಗೆಟ್ಟಿದೆ. ಜತೆಗೆ ಇಲಾಖೆವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ದೆಸೆಯಲ್ಲಿ ಮ.ಬೆಟ್ಟದಲ್ಲಿ ಸಚಿವ ಸಂಪುಟ ಆಯೋಜಿಸಿರುವುದು ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ವರದಾನವಾಗಲಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು. ಇನ್ನು ತಾಲೂಕಿನಲ್ಲಿ ತಾಂಡವಾಡುತ್ತಿರುವ ನಿರುದ್ಯೋಗವನ್ನು ಹೊಗಲಾಡಿಸಲು ಪಣ ತೊಟ್ಟು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಮುಖ್ಯ ಭಾಷಣಕಾರರಾಗಿ ಪ್ರಾಧ್ಯಾಪಕಿ ಪ್ರೇಮಲತಾ ಮಾತನಾಡಿದರು. ಇದಕ್ಕೂ ಮುನ್ನಾ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಂಗವಿಕಲರ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅನುಷಾ, ಹನೂರಿನ ಬಿಎಂಜಿ ಶಾಲೆಯ ನಾಗವೇಣಿ ಹಾಗೂ ಇಬ್ಬರು ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯ ಪವಿತ್ರಾ, ಮಂಜುಳಾ, ಲತಾಮಣಿ, ಸುದೇಶ್, ಹರೀಶ್, ಮಹೇಶ್‌ನಾಯ್ಕ, ಸೋಮಶೇಖರ್, ಬಸವರಾಜು, ಮಹಾದೇಶ್, ನವೀನ್, ಬಿಇಒ ಗುರುಲಿಂಗಯ್ಯ, ತಾಪಂ ಇಒ ಉಮೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಇನ್ಸ್‌ಪೆಕ್ಟರ್ ಶಶಿಕುಮಾರ್ ಇತರರು ಇದ್ದರು.