ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಿಕೊಳ್ಳಿ

07-GPT-1
ಗುಂಡ್ಲುಪೇಟೆ ಪಟ್ಟಣದ ಸ್ಮಾರ್ಟ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಾಹೇಬಗೌಡ ಉದ್ಘಾಟಿಸಿದರು. ಎಂ.ಸಿ.ಶಿವಪ್ರಸಾದ್, ಶಂಕರನಾರಾಯಣ ಜೋಯಿಸ್, ಡಾ.ಸುಜಯ್, ಮಹೇಶ್, ಕೆ.ರಮೇಶ್, ಕೆ.ಎಸ್.ರಾಜಶೇಖರಪ್ಪ, ಕೆ.ಸಿ.ರಾಜಪ್ಪ ಇದ್ದರು.
Published on

ಗುಂಡ್ಲುಪೇಟೆ: ಕಣ್ಣು ಮಹತ್ವದ ಅಂಗವಾಗಿದ್ದು ಪ್ರತಿಯೊಬ್ಬರೂ ಇದರ ರಕ್ಷಣೆ ಮಾಡಿಕೊಳ್ಳಬೇಕು ಎಂದು ಪಟ್ಟಣದ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಸಾಹೇಬಗೌಡ ಹೇಳಿದರು.

ಪಟ್ಟಣದ ಸ್ಮಾರ್ಟ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನೇತ್ರದಾನ ಮಹಾ ದಾನ ಎನ್ನಲಾಗುತ್ತಿದೆ. ಆದರೆ ಸದ್ಯದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆ ತುಂಬ ದುಬಾರಿಯಾಗಿ ಪರಿಣಮಿಸಿದ್ದರಿಂದ ಶ್ರೀಸಾಮಾನ್ಯರು ತಪಾಸಣೆಗೊಳಪಡಲು ಕಷ್ಟವಾಗುತ್ತಿದೆ. ಸ್ವಯಂ ಸೇವಾಸಂಸ್ಥೆಗಳು ಸಾರ್ವಜನಿಕರ ಕಣ್ಣುಗಳ ರಕ್ಷಣೆಗೆ ಕಣ್ಣಿನ ತಪಾಸಣೆ ಶಿಬಿರ ಹಾಗೂ ಉಚಿತ ಶಸ್ತ್ರಚಿಕಿತ್ಸೆ ಆಯೋಜಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ತಾಲೂಕಿನ ಅರ್ಹ ರೋಗಿಗಳು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕಾಂತ್, ಬಹಳ ದಿನಗಳ ನಂತರ ಪಟ್ಟಣದಲ್ಲಿ ಉಚಿತ ಶಿಬಿರ ಆಯೋಜಿಸಿ ಸಾರ್ವಜನಿಕರ ಕಣ್ಣುಗಳ ತಪಾಸಣೆ ಹಾಗೂ ಅಗತ್ಯವಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದೂ ಕೂಡಾ ದುಬಾರಿಯಾಗಿ ಪರಿಣಮಿಸಿದೆ. ಆದ್ದರಿಂದ ಕಣ್ಣಿನ ಸಮಸ್ಯೆಗಳಿರುವ ಸಾರ್ವಜನಿಕರು ಇಂತಹ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳೂ ಶಿಬಿರ ಆಯೋಜಿಸಿ ಹೆಚ್ಚಿನ ಜನರಿಗೆ ಸೇವೆ ದೊರಕುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಶಿಬಿರದಲ್ಲಿ 110 ರೋಗಿಗಳನ್ನು ತಪಾಸಣೆಗೊಳಪಡಿಸಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದ 28 ಜನರನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು.

ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರಾದ ಎಂ.ಸಿ.ಶಿವಪ್ರಸಾದ್, ಶಂಕರನಾರಾಯಣ ಜೋಯಿಸ್, ಅರವಿಂದ ಕಣ್ಣಾಸ್ಪತ್ರೆಯ ನೇತ್ರವೈದ್ಯ ಡಾ.ಸುಜಯ್, ಬಾಚಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಅನುಗ್ರಹ ಫೌಂಡೇಷನ್‌ನ ಕೆ.ರಮೇಶ್, ನಿವೃತ್ತ ಶಿಕ್ಷಕರಾದ ಕೆ.ಎಸ್.ರಾಜಶೇಖರಪ್ಪ, ಕೆ.ಸಿ.ರಾಜಪ್ಪ, ಯು.ಎಂ.ಸಿದ್ದರಾಜು, ಸ್ವಯಂ ಸೇವಕರಾದ ಮಹೇಶ, ಮುದ್ದಮ್ಮ, ಪುಟ್ಟಮ್ಮ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net