

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರ ರಕ್ಷಿಸಿದರೆ ನಾವು ಸುರಕ್ಷಿತ. ಪರಿಸರದಲ್ಲಿನ ಪ್ರತಿ ಜೀವಿಗಳಿಗೂ ತನ್ನದೇ ಆದ ಬದುಕು ಕಟ್ಟಿಕೊಳ್ಳುವ ಉದ್ದೇಶ ಇರುತ್ತದೆ. ಇವುಗಳು ಪರಿಸರದ ಒಂದು ಕೊಂಡಿ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ರಕ್ಷಣೆಯಲ್ಲಿ ತೊಡಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಹೇಳಿದರು.
ವಿಶ್ವ ಪರಿಸರ ದಿನ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ನಾಗರಿಕ ಪರಿಸರ ಸಮಿತಿ, ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು, ಜೆಎಸ್ಎಸ್ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಪ್ರಾಥಮಿಕ , ಪ್ರೌಢ ಶಾಲಾ ವಿಧ್ಯಾರ್ಥಿಗಳಿಗೆ ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವ ವಿಷಯವಾಗಿ ಏರ್ಪಡಿಸಿದ್ದ ನಿಬಂಧ ಮತ್ತು ಚಿತ್ರಕಲಾ ಸ್ಪರ್ಧೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣತಂಗಿ ಮಾತನಾಡಿ, ಸೆಪ್ಟಂಬರ್ನಲ್ಲಿ ಮಣ್ಣಿನಿಂದ ಮಾಡಿದ ಮತ್ತು ಬಣ್ಣ ರಹಿತ ಗಣೇಶ ವಿಗ್ರಹಗಳ ಪೂಜಿಸುವುದಕ್ಕೆ ತಿಳಿಸಿದ ಅವರು, ಈ ಬಗ್ಗೆ ನಿಬಂಧ ಬರೆದು ವಿದ್ಯಾರ್ಥಿಗಳು ವಲಯ ಕಚೇರಿಗೆ ಸಲ್ಲಿಸಿದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು ಎಂದರು.
ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಜಿಲ್ಲೆಯಲ್ಲಿನ ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟಬೇಕು. ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ತಗೆದುಕೊಂಡು ಪರಿಸರ ರಕ್ಷಣೆಯಲ್ಲಿ ಭಾಗಿಯಾಗಬೇಕು ಎಂದರು.
ಲಲಿತಾ ದೊಡವಾಡ, ಮಹಾವೀರ ಉಪಾಧ್ಯಾಯ, ಬಿ.ಐ. ಈಳಿಗೇರ, ಜೆಎಸ್ಎಸ್ ಕಾಲೇಜು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ, ಇತರರು ಇದ್ದರು.
ಡಾ. ವಿಲಾಸ ಕುಲಕರ್ಣಿ ಸ್ವಾಗತಿಸಿದರು. ಜಗದೀಶ ಐ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಚ್. ನಾಯಕ ನಿರೂಪಿಸಿದರು. ಡಾ. ರೇಣುಕಾ ಅಮಲಜೇರಿ ವಂದಿಸಿದರು.