ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಿ

Everyone participates impartially.
Everyone participates impartially.
Published on

ಮುಧೋಳ: ನಮ್ಮ ದೇಶದ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಗರದಲ್ಲಿ ಪಕ್ಷಾತೀತವಾಗಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಯಾತ್ರೆಯಲ್ಲಿ ಪಕ್ಷಾತೀತವಾಗಿ ನಗರದ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಕರೆ ನೀಡಿದರು.

ನಗರದ ದತ್ತ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ 23 ರಂದು ನಡೆಯುವ ತಿರಂಗಾ ಯಾತ್ರೆ ಗಾಂಧಿ ವೃತ್ತದಿಂದ ಆರಂಭಗೊಂಡು ಶಿವಾಜಿ ವೃತ್ತಕ್ಕೆ ತೆರಳಿ ಸಮಾಪ್ತಿಗೊಳ್ಳಲಿದೆ. ಯಾತ್ರೆಯಲ್ಲಿ ಎಲ್ಲ ಸಂಘಟನೆಯವರು, ನಿವೃತ್ತ ಸೈನಿಕರು ಪಾಲ್ಗೊಳ್ಳಬೇಕು ಮನವಿ ಮಾಡಿದರು.

ನಾವು ಜಗತ್ತಿಗೆ ಪಾಕಿಸ್ತಾನ ವಿಶ್ವಾಸದ್ರೋಹಿ ದೇಶ ಎಂಬುದನ್ನು ತೋರಿಸಬೇಕಾಗಿತ್ತು. ಅದೊಂದು ಉದ್ದೇಶಕ್ಕೆ ಕದನ ವಿರಾಮ ಘೋಷಿಸಿ ಮೋದಿ ಮುತ್ಸದ್ದಿತನ ತೋರಿದ್ದಾರೆ ಎಂದು ಕದನ ವಿರಾಮ ಸಮರ್ಥಿಸಿಕೊಂಡರು.

ವಕ್ಫ್ ಆಸ್ತಿ ಸಾರ್ವಜನಿಕರ ಆಸ್ತಿ. ಅದರಿಂದ ಬರುವ ಆದಾಯದಿಂದ ಬಡ ಮುಸ್ಲಿಮರಿಗೆ ನೆರವು ನೀಡುವ ಕೆಲಸವಾಗಬೇಕು. ಆದರೆ ಕೆಲವರು ಅಂತಹ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಕೆಲವೊಂದನ್ನು ಒತ್ತೆ ಇಟ್ಟಿದ್ದಾರೆ. ಅವುಗಳನ್ನು ತಡೆಗಟ್ಟಿ ಬಡಮುಸ್ಲಿಮರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರ ಬಗ್ಗೆ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ ಎಂದರು.

ಬಿಜೆಪಿ ಮುಖಂಡ ಧರೆಪ್ಪ ಸಾಂಗ್ಲಿಕರ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದಿಟ್ಟ ನಿರ್ಧರದಿಂದ ದೇಶದ ಸುರಕ್ಷತೆಗೆ ಅವಕಾಶ ದೊರೆತಿದೆ. ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಸಕ್ರಿಯವಾಗಿ ಕಾರ್ಯ ನಿರ್ವಹಿಸೋಣ ಎಂದರು.

ಮುಖಂಡ ಗುರುಪಾದ ಕುಳಲಿ ಮಾತನಾಡಿದರು.

ಯುವ ಮುಖಂಡ ಅರುಣ ಕಾರಜೋಳ, ಗ್ರಾಮೀಣ ಮಂಡಳದ ತಾಲೂಕು ಅಧ್ಯಕ್ಷ ಸಂಗನಗೌಡ ಕಾತರಕಿ, ಕರಬಸಯ್ಯ ಹಿರೇಮಠ, ಅವಳಿ ಜಿಲ್ಲಾ ಕೆಎಂಎ್ ನಿರ್ದೇಶಕ ವಿವೇಕಾನಂದ ಪಾಟೀಲ, ಆರ್.ಟಿ. ಪಾಟೀಲ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸುಮೇದಾ ಮಾನೆ, ಕೆ.ಆರ್. ಮಾಚಪ್ಪನ್ನವರ, ಕಲ್ಲೇಶ ಗೋಸಾರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಿ ಮಂಟೂರ, ಸದಾಶಿವ ಇಟಕನ್ನವರ, ಕಲ್ಲಪ್ಪ ಸಬರದ, ಶಿವನಗೌಡ ನಾಡಗೌಡ, ನಾಗಪ್ಪ ಅಂಬಿ, ಗಡ್ಡಪ್ಪ ಬಾರಕೇರ, ಸದಸ್ಯ ಗುರುಪಾದ ಕುಳಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net