ಮೆದುಳಿನ ಆರೋಗ್ಯದ ಅರಿವು ಪ್ರತಿಯೊಬ್ಬರಿಗೂ ಅಗತ್ಯ

mind
mind
Published on

ಪ್ರಮುಖ ಮುಖ್ಯಾಂಶಗಳು

  • ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪನೆಯಾಗಿದೆ ಮೆದುಳು ಚಿಕಿತ್ಸಾಲಯ
ಮಂಗಳೂರು:- ಪ್ರತಿ ವರ್ಷವೂ ಜು. 22ರಂದು ವಿಶ್ವ ಮೆದುಳು ದಿನ-ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನವು ನಮಗೆ ಮೆದುಳಿನ ಮಹತ್ವವನ್ನು ತಿಳಿಸುವ ದಿನವಾಗಿದೆ. ಮೆದುಳು ನಮ್ಮ ಶರೀರದಲ್ಲಿ ಅತ್ಯಂತ ಪ್ರಮುಖ ಒಂದು ಅಂಗ. ನಮ್ಮ ಯೋಚನೆ, ಕಲಿಕೆ, ನೆನಪು, ಅರ್ಥಪೂರ್ಣ ಸಂವಹನ, ಸೂಕ್ತ ನಿರ್ಧಾರ ಹೀಗೆ ದಿನದ ಹೆಚ್ಚಿನ ಚಟುವಟಿಕೆಗಳಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ.
ಈ ಮಹತ್ವದ ಹೊರತಾಗಿಯೂ ಹೃದಯ, ಮಧುಮೇಹದಂತಹ ರೋಗಗಳಿಗೆ ಕೊಡುವಷ್ಟು ಪ್ರಾಮುಖ್ಯವನ್ನು ಮೆದುಳಿಗೆ ಸಂಬಂಧಿಸಿದ ರೋಗಗಳಿಗೆ ನಾವು ನೀಡದಿರುವುದು ವಿಷಾದದ ಸಂಗತಿ. ಜನರಲ್ಲಿ ಜಾಗೃತಿಯನ್ನು ಮೂಡಿಸಲು, ಆರೋಗ್ಯ ಪೂರ್ಣ ಜೀವನವನ್ನು ಉತ್ತೇಜಿಸಲು ಮತ್ತು ನಮ್ಮ ಮೆದುಳಿನ ನರಗಳಲ್ಲಿ ಆಗಬಹುದಾದ ಏರುಪೇರುಗಳ ಬಗ್ಗೆ ಆರಂಭದಲ್ಲಿಯೇ ತಪಾಸಣೆ ನಡೆಸಲು ಈ ದಿನವು ನಮಗೆ ಅವಕಾಶ ನೀಡುತ್ತಿದೆ.
ನರರೋಗ ಶಾಸ್ತ್ರಕ್ಕೆ ಸಂಬಂಧಿಸಿದ ರೋಗಗಳು ವಯೋಮಿತಿಯನ್ನು ಲೆಕ್ಕಿಸದೆ ಹೆಚ್ಚಿನವರಲ್ಲಿ ನಿಶ್ಯಕ್ತಿ, ಅಂಗವಿಕಲತೆಗೆ ಪ್ರಮುಖ ಕಾರಣವಾಗಿ ವಿಶ್ವದಾದ್ಯಂತ ಕಾಣಿಸುತ್ತಿದೆ. ಪಾರ್ಶ್ವವಾಯು, ಮೂರ್ಛೆರೋಗ ಅಥವಾ ಅಪಸ್ಮಾರ, ಚಿತ್ತ ವೈಕಲ್ಯ, ಪಾರ್ಕಿನ್, ಮೈಗ್ರೇನ್, ನರದೌರ್ಬಲ್ಯ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ರೋಗಗಳು ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರಬಹುದು ಎಂದರು.
ಈ ಸಂಬಂಧ ಎಚ್ಚರಿಕೆಯ ಸೂಚನೆಗಳನ್ನು ಮುಂಚಿತವಾಗಿ ಗುರುತಿಸುವುದರ ಮೂಲಕ ಜೀವವನ್ನು ಅಪಾಯದಿಂದ ಪಾರು ಮಾಡಬಹುದು. ಇದ್ದಕ್ಕಿದ್ದಂತೆ ಮುಖ ಕೈ ಕಾಲುಗಳಲ್ಲಿ ದೌರ್ಬಲ್ಯ, ತೊದಲು ಹಾಗೂ ಅಸ್ಪಷ್ಟ ಮಾತು, ದೃಷ್ಟಿಯನ್ನು ಕಳೆದುಕೊಳ್ಳುವುದು, ಅತಿ ತೀವ್ರವಾದ ತಲೆ ಸುತ್ತು, ಇದ್ದಕ್ಕಿದ್ದಂತೆ ಗೊಂದಲಗಳು ಪಾರ್ಶ್ವವಾಯುವಿನ ಅಪಾಯದ ಮುನ್ಸೂಚನೆಗಳು. ಈ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯಕೀಯ ಚಿಕಿತ್ಸೆಯತ್ತ ಗಮನ ಹರಿಸಿದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇವುಗಳಲ್ಲದೆ ಮತ್ತೆ ಮತ್ತೆ ಕಾಣಿಸಿಕೊಳ್ಳುವ ತಲೆ ಬೇನೆ, ಮರುಕಳಿಸುತ್ತಿರುವ ಅಪಸ್ಮಾರ ಅಥವಾ ಮೂರ್ಛೆ, ನೆನಪಿನ ಶಕ್ತಿಯ ಕ್ಷೀಣತೆ, ಮರೆಗುಳಿತನ, ನಡುಕ, ಸಮತೋಲನದ ಸಮಸ್ಯೆ, ಜಡತ್ವಗಳನ್ನು ವಯೋಸಹಜವಾದ ಲಕ್ಷಣಗಳೆಂದು ಭಾವಿಸಿ ನಿರ್ಲಕ್ಷಿಸಲೇಬಾರದು. ಆದಷ್ಟು ಶೀಘ್ರವಾಗಿ ಆರಂಭದ ಹಂತದಲ್ಲಿಯೇ ರೋಗ ಪತ್ತೆ ಮಾಡಿ ಸೂಕ್ತ ಆರೈಕೆ ಒದಗಿಸಿದಲ್ಲಿ ಉತ್ತಮ ಫಲಿತಾಂಶದೊಂದಿಗೆ ಜೀವನದ ಗುಣಮಟ್ಟದಲ್ಲಿಯೂ ಪ್ರಗತಿಯನ್ನು ಕಾಣಬಹುದು.

ವೆನ್ಲಾಕ್‌ನಲ್ಲಿ ಚಿಕಿತ್ಸಾಲಯ ಆರಂಭ

ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯದಲ್ಲಿ ಮೊದಲ ಹೆಜ್ಜೆಯ ಕರ್ನಾಟಕ ಬ್ರೇನ್ ಹೆಲ್ತ್ ಇನಿಶಿಯೇಟಿವ್ ಅಡಿಯಲ್ಲಿ ಮೆದುಳು ಚಿಕಿತ್ಸಾಲಯವು ಸ್ಥಾಪಿತವಾಗಿದೆ. ಈ ಚಿಕಿತ್ಸಾಲಯವು ಸಮಗ್ರ ರೋಗಿ ಕೇಂದ್ರಿತ ನರರೋಗ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿದ್ದು, ಮಾನಸಿಕ ಆರೋಗ್ಯ ಕಾಪಾಡಲು ಬದ್ಧವಾಗಿರುತ್ತದೆ. ಈ ಚಿಕಿತ್ಸಾಲಯವು ತಪಾಸಣೆ, ಮೌಲ್ಯಮಾಪನ, ರೋಗನಿರ್ಣಯ, ಸೂಕ್ತ ಚಿಕಿತ್ಸೆ, ಆಪ್ತಸಲಹೆ, ಸಮಾಲೋಚನೆ, ಅಪಾಯಕಾರಿ ಅಂಶಗಳ ನಿರ್ವಹಣೆ, ಆರೈಕೆ ನೋಡಿಕೊಳ್ಳುವವರಿಗೆ ಬೆಂಬಲ, ಪುನರ್ವಸತಿ, ಮಾರ್ಗದರ್ಶನ ಮತ್ತು ಅಗತ್ಯವೆಂದು ಕಂಡು ಬಂದಲ್ಲಿ ತಜ್ಞರ ಸೇವೆಗೆ ಶಿಫಾರಸು ಮೊದಲಾದ ಕ್ರಮಗಳನ್ನು ರೋಗಿಗಳ ಹಿತದೃಷ್ಟಿಯಿಂದ ಒದಗಿಸುತ್ತಿದೆ.
ಸರಳವಾದ ದೈನಂದಿನ ಜೀವನ, ದೈಹಿಕವಾದ ಚಟುವಟಿಕೆ, ಆರೋಗ್ಯಕರ ಆಹಾರ ಸೇವನೆ. ರಕ್ತದೊತ್ತಡ ಮತ್ತು ಮಧುಮೇಹಗಳ ನಿಯಂತ್ರಣ. ತಂಬಾಕು ಸೇವನೆಯನ್ನುತ್ಯಜಿಸುವುದು. ಒತ್ತಡಗಳ ನಿರ್ವಹಣೆ. ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ. ನರ ಸಂಬಂಧ ರೋಗಗಳಿಂದ ಬಳಲುತ್ತಿರುವವರಿಗೆ ಬೆಂಬಲ ಹಾಗೂ ಆತ್ಮವಿಶ್ವಾಸ. ಈ ಮೂಲಕ ಆರೋಗ್ಯಪೂರ್ಣ ಸಮುದಾಯ ಮತ್ತು ಉಜ್ವಲ ಭವಿಷ್ಯ ನಿರ್ಮಾಣ ಮಾಡೋಣ.
  • ಡಾ. ದಿವಿತಿ ವಿನಯ ಸೊರಕೆ, ವೆನ್ಲಾಕ್ ಜಿಲ್ಲಾಸ್ಪತ್ರೆಯ ಮೆದುಳು ಆರೋಗ್ಯ ಚಿಕಿತ್ಸಾಲಯದ ವೈದ್ಯಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net