

ಹಾನಗಲ್ಲ: ಪರಿಸರಕ್ಕೆ ಧಕ್ಕೆ ಮಾಡುವ ಮನುಷ್ಯನಿಗೆ ಇದು ಮಾನವ ಕುಲದ ಬೆಳವಣಿಗೆಗೆ ಧಕ್ಕೆ ಎಂಬ ಅರಿವು ಮೂಡಿದರೆ ಮಾತ್ರ ಬದಲಾವಣೆ ಸಾಧ್ಯ. ಕಳೆದ 44 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದಕ್ಕಾಗಿ ಜನ ಜಾಗೃತಿ ಮೂಡಿಸುತ್ತಿದೆ ಎಂದು ಸಂಸ್ಥೆಯ ತಾಲೂಕು ಕೃಷಿ ಮೇಲ್ವಿಚಾರಕ ಮಹಾಂತೇಶ ಹರಕುಣಿ ಹೇಳಿದರು.
ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮಸ್ಥಳ ಸಂಸ್ಥೆ ಇಡೀ ರಾಜ್ಯದಲ್ಲಿ ಕೆರೆ ಹೂಳೆತ್ತುವುದು, ಕೃಷಿ ಅಭಿವೃದ್ಧಿಪಡಿಸುವುದು, ಪರಿಸರ ಸಂರಕ್ಷಿಸುವುದು, ಮಂದಿರಗಳ ಜೀಣೋದ್ಧಾರವೂ ಸೇರಿದಂತೆ ಸಮಾಜಮುಖಿ ಕಾರ್ಯದಲ್ಲಿ ಮುಂದಿದೆ. ಸರ್ಕಾರದ ಜತೆಗೆ ಸಂಸ್ಥೆಯೂ ಒಂದು ಭಾಗವಾಗಿ ಜನಹಿತಕ್ಕೆ ಮುಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು, ಕೃಷಿಕರನ್ನೊಳಗೊಂಡು ಇಂತಹ ಜಾಗೃತಿ ಅತ್ಯಂತ ಯಶಸ್ವಿಯಾಗುತ್ತಿದೆ. ಒಂದು ಊರಿನ ಸೊಗಸು ಆ ಊರಿನ ದೇವಸ್ಥಾನ, ಕೆರೆ, ಶಾಲೆ, ಆಸ್ಪತ್ರೆಗಳ ಸುವ್ಯವಸ್ಥೆಯನ್ನು ಅವಲಂಬಿಸಿದೆ. ಇದೆಲ್ಲದರಲ್ಲಿ ಸಾರ್ವಜನಿಕರ ಪಾತ್ರ ಬಹು ಮುಖ್ಯವಾದುದು ಎಂದರು.
ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಯವಂತಪ್ಪ ಬೆಳಗಾಲ, ಕಾರ್ಯದರ್ಶಿ ನೀಲಪ್ಪ ತಿಳವಳ್ಳಿ, ಮಾರುತಿ ಶಿಡ್ಲಾಪೂರ, ಗ್ರಾಪಂ ಸದಸ್ಯ ಜಗದೀಶ ಹಿರೇಕಣಗಿ, ಅಣ್ಣಪ್ಪ ಸಣ್ಣಮನಿ, ಸುರೇಶ ಮಲಗುಂದ, ನಿಂಗಪ್ಪ ಹಳೆಕೋಟಿ, ಒಕ್ಕೂಟದ ಅಧ್ಯಕ್ಷೆ ಸುನಂದಾ ಹಳೆಕೋಟಿ, ಮಮತಾ ಕಾರಕೂನ, ರಾಧಾ ಸಾಬರದ, ಕನ್ನಪ್ಪ ಬಂಕಾಪುರ, ಕಾಂತೇಶ ಹಿರೇಕಣಗಿ, ಇತರರಿದ್ದರು.
ಕಾರ್ಯಕ್ರಮದ ನಂತರ ಗ್ರಾಮದ ಬಸವೇಶ್ವರ ದೇವಸ್ಥಾನದ ಸುತ್ತಲೂ ವಿವಿಧ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಧರ್ಮಸ್ಥಳ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಸಸಿಗಳನ್ನು ಕಾಪಾಡುವ ಜವಾಬ್ದಾರಿ ಪ್ರಕಟಿಸಿದರು.