

ಹೂವಿನಹಡಗಲಿ: ಪ್ಲಾಸ್ಟಿಕ್ ಉತ್ಪನ್ನ ಬಳಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ನೈಸರ್ಗಿಕ ವಸ್ತುಗಳನ್ನು ಬಳಸುವುದರಿಂದ ಪರಿಸರ ಮತ್ತು ಮಾನವನಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಪುರಸಭೆ ಹಾಗೂ ವರ್ತಕರ ಸಂಘಟನೆ ಮತ್ತು ಇತರ ಸಂಸ್ಥೆಗಳ ಸಹಯೋಗದಿಂದ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಮತ್ತು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗಡಿಗಳ ಮಾಲೀಕರು ಮತ್ತು ವರ್ತಕರು ಪ್ಲಾಸ್ಟಿಕ್ ಉತ್ಪನ್ನಗಳ ಬಳಸಬಾರದು. ಪ್ಲಾಸ್ಟಿಕ್ ಬಳಕೆ ಮನುಷ್ಯನ ಆಯುಷ್‌ನ್ನು ಕ್ರಮೇಣ ಕುಂಟಿತಗೊಳಿಸುತ್ತದೆ. ಪ್ರಾಣಿ, ಪಕ್ಷಿಗಳು ಪ್ಲಾಸ್ಟಿಕ್ ತಿಂದು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಆದ್ದರಿಂದ ಎಲ್ಲರೂ ಪ್ಲಾಸ್ಟಿಕ್ ಉತ್ಪನ್ನ ತ್ಯಜಿಸಲು ಮುಂದಾಗಬೇಕು ಎಂದರು.
ತಹಸೀಲ್ದಾರ್ ಕೆ.ಶರಣಮ್ಮ ಮಾತನಾಡಿ, ವ್ಯಾಪಾರಸ್ಥರು ಮತ್ತು ಉದ್ಯೋಗದಾತರು ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವುದು ಮತ್ತು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಯಾರಾದರು ಪ್ಲಾಸ್ಟಿಕ್ ಉತ್ಪನ್ನ ಬಳಸುವ ಮತ್ತು ಮಾರಾಟ ಮಾಡುತ್ತಿರುವುದು ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದರು.
ಇದನ್ನೂ ಓದಿ: ಹಾನಿಕಾರಕ ಪ್ಲಾಸ್ಟಿಕ್ಮುಕ್ತ ಸಮಾಜದ ಗುರಿ
ಪುರಸಭೆಯ ಸಿಬ್ಬಂದಿ ತಹಸಿಲ್ ಕಚೇರಿ ಆವರಣ ಸ್ವಚ್ಛಗೊಳಿಸಿದರು. ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಜೆ.ಕೆ.ಸಂತೋಷಕುಮಾರ್, ಪರಿಸರ ಅಭಿಯಂತರ ಅಮರೇಶ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಮಾರುತಿ, ವರ್ತಕರ ಸಂಘ ಅಧ್ಯಕ್ಷ ಎಸ್.ಎಂ.ಅಶೋಕ್, ಉದ್ಯಮಿ ಡಿ.ಮಹಾಬಲೇಶ್ವರ, ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್, ಪುರಸಭೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.