ಎಲ್ಲರೂ ಕಡ್ಡಾಯ ಮತದಾನ ಮಾಡಿ

Everyone must vote
ವಿಜಯಪುರದ ಕೆನರಾ ಬ್ಯಾಂಕ್​ನಲ್ಲಿ ಮತದಾನ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ದಾರಾವತ್​ ವೀರಣ್ಣ, ವಿಷ್ಣುವರ್ಧನ ರೆಡ್ಡಿ, ಎ.ಬಿ. ಅಲ್ಲಾಪೂರ ಮತ್ತಿತರರಿದ್ದಾರೆ.
Published on

ವಿಜಯಪುರ: ನಿಮ್ಮ ಒಂದು ಮತವೂ ಅತೀ ಮುಖ್ಯವಾಗಿದ್ದೂ, ಮತದಾನದ ದಿನದಂದು ಕಡ್ಡಾಯವಾಗಿ ಮತಗಟ್ಟೆಗಳಿಗೆ ತೆರಳಿ ಎಲ್ಲರೂ ಮತದಾನ ಮಾಡಬೇಕು ಜಿಲ್ಲಾ ಸ್ವೀಪ್​ ಸಮಿತಿಯ ನೋಡೆಲ್​ ಅಧಿಕಾರಿ ಸಿ.ಆರ್​. ಮುಂಡರಗಿ ವಿನಂತಿಸಿದರು.

ಜಿಲ್ಲಾ ಸ್ವೀಪ್​ ಸಮಿತಿ ಮತ್ತು ಲೀಡ್​ ಬ್ಯಾಂಕ್​ ವ್ಯವಸ್ಥಾಪಕರುಗಳ ಸಹಯೋಗದಲ್ಲಿ ನಗರದ ವಿವಿಧ ಬ್ಯಾಂಕ್​ ಹಾಗೂ ಅಂಚೆ ಕಚೇರಿಗಳಿಗೆ ತೆರಳಿ ಬ್ಯಾಂಕ್​ ಅಧಿಕಾರಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಂಗಳವಾರ ಹಮ್ಮಿಕೊಳ್ಳಲಾದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ದಿವ್ಯಾಂಗರಿಗೆ ರ್ಯಾಂಪ್​ ವ್ಯವಸ್ಥೆ ಮತ್ತು ಇನ್ನಿತರ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲರೂ ಮತದಾನದಲ್ಲಿ ಭಾಗಿಯಾಗುವ ಮೂಲಕ ಚುನಾವಣೆ ಪ್ರಕ್ರಿಯೆ ಯಶಸ್ವಿಗೊಳಿಸಬೇಕೆಂದರು.

ಲೀಡ್​ ಬ್ಯಾಂಕ್​ನ ವ್ಯವಸ್ಥಾಪಕ ನರೇಂದ್ರಬಾಬು ಮಾತನಾಡಿ, ಮತದಾನ ಮಾಡುವುದು ನಮ್ಮ ಹಕ್ಕು. ಅಲ್ಲದೆ, ನಮ್ಮ ಜವಾಬ್ದಾರಿಯೂ ಸಹ. ಎಲ್ಲರೂ ಮತದಾನ ಮಾಡಿದಾಗಲೇ ನಮ್ಮ ದೇಶ ಅಭಿವೃದ್ಧಿಯಾಗಲು ಸಾಧ್ಯ. ನಿಮ್ಮ ಒಂದು ಮತ ದೇಶಕ್ಕೆ ಅತೀ ಮುಖ್ಯವಾಗಿದ್ದೂ, ಕಡ್ಡಾಯವಾಗಿ ಮತದಾನ ಮಾಡುವಂತೆ ಹೇಳಿದರು.

ಎಸ್​ಬಿಐ ಬ್ಯಾಂಕ್​ನ ಮುಖ್ಯ ವ್ಯವಸ್ಥಾಪಕಿ ವಾಣಿಶ್ರೀ ಉಮರಾಣಿ ಮಾತನಾಡಿ, ಪ್ರತಿ ಮತೇತ್ರಗಳಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಗೋಸ್ಕರ ವಿಶೇಷವಾಗಿ ಮಹಿಳಾ ಸ್ನೇಹಿ ಮತಗಟ್ಟೆ (ಪಿಂಕ್​/ಸಖಿ ಬೂತ್​) ಗಳನ್ನು ಅಲಂಕರಿಸಲಾಗಿದೆ. ಎಲ್ಲ ಮಹಿಳೆಯರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕೆಂದು ಹೇಳಿದರು.

ನಂತರ ಎಲ್ಲರೂ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮತದಾನ ಜಾಗೃತಿಯ ೂಷಣೆ ಕೂಗಿದರು. ವಿವಿಧ ಬ್ಯಾಂಕ್​ಗಳ ಗೋಡೆಯ ಮೇಲೆ ಮತದಾನ ಜಾಗೃತಿಯ ಪೋಸ್ಟರ್​ಗಳನ್ನು ಅಂಟಿಸಲಾಯಿತು. ಮತದಾನ ಜಾಗೃತಿಯ ಕರಪತ್ರಗಳನ್ನು ಬ್ಯಾಂಕ್​ಗಳ ವ್ಯವಸ್ಥಾಪಕರಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾ ಅಂಚೆ ಕಚೇರಿ : ನಗರದಲ್ಲಿರುವ ಜಿಲ್ಲೆಯ ಮುಖ್ಯ ಅಂಚೆ ವಿಭಾಗ ಕಚೇರಿಗೆ ಭೇಟಿ ನೀಡಿ, ಅಂಚೆ ಇಲಾಖೆಯಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಕಚೇರಿಯ ಅಧೀಕ್ಷಕ ಜಿ.ಬಿ ನಾಯಕ ಅವರೊಂದಿಗೆ ಚರ್ಚಿಸಲಾಯಿತು. ಜಿಲ್ಲಾ ಸ್ವೀಪ್​ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ತಯಾರಿಸಿರುವ ಸೀಲುಗಳು, ಕರಪತ್ರಗಳು ಮತ್ತು ಪೋಸ್ಟರ್​ಗಳನ್ನು ಹಸ್ತಾಂತರಿಸಿದರು. ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲೆಯ ಅಂಚೆ ವಿಭಾಗದ ಅಡಿಯಲ್ಲಿ ಬರುವ ಎಲ್ಲ ಅಂಚೆ ಕಚೇರಿಗಳಿಗೆ ಬರುವ ಗ್ರಾಹಕರಿಗೆ ಮತದಾನ ಜಾಗೃತಿ ಮೂಡಿಸಿ ಜಿಪಂಗೆ ಮಾಹಿತಿ ನೀಡಲು ವಿನಂತಿಸಲಾಯಿತು. ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ. ಅಲ್ಲಾಪೂರ, ಕೆನರಾ ಬ್ಯಾಂಕ್​ ಮುಖ್ಯ ವ್ಯವಸ್ಥಾಪಕ ದಾರಾವತ್​ ವೀರಣ್ಣ, ಹಿರಿಯ ವ್ಯವಸ್ಥಾಪಕ ವಿಷ್ಣುವರ್ಧನ ರೆಡ್ಡಿ, ಕೆನರಾ ಬ್ಯಾಂಕ್​ ಹಿರಿಯ ವ್ಯವಸ್ಥಾಪಕ ಅನಿಲ ಮೋರೆ, ಎಸ್​ಬಿಐ ಬ್ಯಾಂಕ್​ನ ಕ್ರೆಡಿಟ್​ ಮ್ಯಾನೆಜರ್​ ಕೃಷ್ಣಯ್ಯ, ಪಿ.ಆರ್​. ದೇಸಾಯಿ, ವಿ.ವಿ. ನಿಂಬರಗಿ, ವಿ.ಎಸ್​. ಉಮರಾಣಿ, ಸಿ.ಸಿ. ಕುಲಕರ್ಣಿ, ವಿಶ್ವನಾಥ ಶಹಾಪೂರ, ಸುವರ್ಣ ಭಜಂತ್ರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net