ರಕ್ತದಾನ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ

14spt1
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು. ಡಾ.ಕರುಂಬಯ್ಯ, ಸುರೇಶ್, ಮಹೇಶ್, ಜ್ಯೋತಿ ಇದ್ದರು.
Published on

ಸೋಮವಾರಪೇಟೆ: ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಬೇಡಿಕೆ ಹೆಚ್ಚಾಗಿದ್ದು, ರಕ್ತದಾನಿಗಳು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮಹಾಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಮನವಿ ಮಾಡಿದರು.

ಜೇಸಿಐ ಸೋಮವಾರಪೇಟೆ ಪುಷ್ಪಗಿರಿ, ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ಹಾಗೂ ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಅಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತಿಂಗಳಿಗೆ 500 ಯೂನಿಟ್‌ನಷ್ಟು ರಕ್ತದ ಅವಶ್ಯಕತೆ ಇದೆ. ಸಂಘ-ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸಬೇಕು. ರಕ್ತದಾನಿಗಳಿಗೆ ಹತ್ತಿರವಾದ ಸ್ಥಳದಲ್ಲೇ ಶಿಬಿರಗಳನ್ನು ಆಯೋಜಿಸಿದರೆ ಉಪಯೋಗವಾಗಲಿದೆ. ಪ್ರತಿ ತಿಂಗಳು ಜಿಲ್ಲೆಯಲ್ಲಿ 10 ಶಿಬಿರಗಳ ಆಯೋಜನೆಗೊಂಡಾಗ ಅವಶ್ಯಕತೆಯಷ್ಟು ರಕ್ತ ಸಂಗ್ರಹವಾಗಲಿದೆ ಎಂದು ಹೇಳಿದರು.

ಮಡಿಕೇರಿ ಜಿಲ್ಲಾಸ್ಪತ್ರೆ ಸುಸಜ್ಜಿತಗೊಂಡಿದ್ದು, ಹೊರಜಿಲ್ಲೆಗಳಿಂದ ಪ್ರತಿನಿತ್ಯ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದರು.

ಸಂಘ-ಸಂಸ್ಥೆಯವರು ವಾಟ್ಸ್ ಆ್ಯಪ್ ಮೂಲಕ ಮನವಿ ಮಾಡಿದರೆ ದಾನಿಗಳು ಬರುವುದಿಲ್ಲ. ವೈಯುಕ್ತಿಕವಾಗಿ ಸಂಪರ್ಕಿಸಿ ಮನವಿ ಮಾಡಿಕೊಂಡರೆ, ಅರೋಗ್ಯವಂತರು ಯಾವುದೇ ಹಿಂಜರಿಕೆ ಇಲ್ಲದೆ ರಕ್ತದಾನ ಮಾಡುತ್ತಾರೆ ಎಂದರು.

ಕೆಲವೆಡೆ ಮೂಢನಂಬಿಕೆಯಿಂದ ರಕ್ತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಕ್ತದಾನ ಪವಿತ್ರವಾದ ಕೆಲಸವಾಗಿದ್ದು, ದಾನಿಗಳು ಕೊಟ್ಟ ರಕ್ತದಿಂದ ಮೂರು ಜೀವಗಳನ್ನು ಕಾಪಾಡಬಹುದು. ರಕ್ತದಾನದಿಂದ ದಾನಿಗಳ ಆರೋಗ್ಯವೂ ವೃದ್ಧಿಸುತ್ತದೆ. ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದಾನಿಗಳು ಕೊಟ್ಟ ರಕ್ತವನ್ನು ರಕ್ತನಿಧಿ ಕೇಂದ್ರ ಎಲ್ಲ ರೀತಿಯ ಪರೀಕ್ಷೆಗೆ ಒಳಪಡಿಸುವುದರಿಂದ ಕಾಯಿಲೆಗಳಿದ್ದರೆ ಗೊತ್ತಾಗುತ್ತದೆ. ಸೂಕ್ತ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಜೇಸಿಐ ಸಂಸ್ಥೆಯ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್ ಮಾತನಾಡಿ, ರಕ್ತದಾನ ಶಿಬಿರ ಆಯೋಜಿಸಲು ಒಕ್ಕಲಿಗರ ಯುವವೇದಿಕೆ ಮತ್ತು ಡಾಲ್ಫಿನ್ ಸ್ಪೋರ್ಟ್ಸ್ ಕ್ಲಬ್‌ನವರು ಕೈಜೋಡಿಸಿದ್ದಾರೆ. ಸದಸ್ಯರು ರಕ್ತದಾನ ಮಾಡಿದ್ದಾರೆ. ಜೇಸಿಐ ಸದಾ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಹಮ್ಮೆಯ ವಿಷಯವಾಗಿದ್ದು, ಕೆಲವೊಮ್ಮೆ ವೈಯುಕ್ತಿಕ ಕಾರಣದಿಂದ ಕೆಲವರಿಗೆ ರಕ್ತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹವರು ಆರೋಗ್ಯ ಸುಧಾರಿಸಿದ ನಂತರ ರಕ್ತದಾನ ಮಾಡಬಹುದು ಎಂದು ಹೇಳಿದರು.

48 ಮಂದಿ ರಕ್ತದಾನ ಮಾಡಿದರು. ಹೆಚ್ಚು ರಕ್ತದಾನ ಮಾಡಿದ ಚಂದ್ರಾವತಿ ಮತ್ತು ವಿಜಯ್ ಹಾನಗಲ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಒಕ್ಕಲಿಗರ ಯುವವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್, ಡಾಲ್ಫೀನ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಹೇಶ್, ಜೇಸಿಐ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಜೇಶ್, ಕಾರ್ಯದರ್ಶಿ ವಿನುತಾ ಸುದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net