

ಎನ್.ಆರ್.ಪುರ: ಶಾಲೆ ಅಭಿವೃದ್ಧಿಗೆ ಎಸ್‌ಡಿಎಂಸಿ ಜತೆಗೆ ಹಳೇ ವಿದ್ಯಾರ್ಥಿ ಸಂಘವು ಕೈ ಜೋಡಿಸಿದರೆ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ ಕುಮಾರ್ ಹೇಳಿದರು.
ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ರಚನಾ ಕಾರ್ಯಕ್ರಮದಲ್ಲಿ ಮಾತನಾಡಿ, ದಾನಿಗಳ ಸಹಕಾರದಿಂದ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ನೀಡಬಹುದು. ಹಳೇ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿರುವುದರಿಂದ ಶಾಲೆಗೆ ದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದರೆ ಆ ಶಾಲೆ ಅಭಿವೃದ್ಧಿ ಕಡೆ ಸಾಗುತ್ತದೆ ಎಂದರು.
ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಕ್ರಿಯಾಶೀಲ ಶಿಕ್ಷಕರಿದ್ದರೆ ಮಾತ್ರ ಸರ್ಕಾರಿ ಶಾಲೆಗಳು ಬೆಳವಣಿಗೆ ಹೊಂದಲು ಸಾಧ್ಯ. ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಹಾಜರಾತಿ ಇಲ್ಲದೆ ಮುಚ್ಚುವ ಹಂತಕ್ಕೆ ಬಂದಿತ್ತು. ಮುಖ್ಯಶಿಕ್ಷಕಿ ಶಿಲ್ಪ್ಪಾ ಕುಮಾರಿ ಅವರು ಎಸ್‌ಡಿಎಂಸಿ, ಗ್ರಾಮಸ್ಥರು ಹಾಗೂ ಹಳೇ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಮಕ್ಕಳ ದಾಖಲಾತಿ ಹೆಚ್ಚಿಸಿದ್ದಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ವಿಜು, ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಚಂದ್ರಶೇಖರ್, ಲಿಲ್ಲಿ ಮಾತುಕುಟ್ಟಿ, ಬಿಐಇಆರ್‌ಟಿ ತಿಮ್ಮೇಶಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಉಪಾಧ್ಯಕ್ಷ ವಿಲ್ಸನ್ ಇದ್ದರು.