ಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಿ

Everyone is committed to protecting religion.
Everyone is committed to protecting religion.
Published on

ಚಿಕ್ಕಪಡಸಲಗಿ: ಧರ್ಮ ರಕ್ಷಣೆಗೆ ನಾವು ಎಂಥ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎನ್ನುವ ಮನಸ್ಥಿತಿ ಬೆಳೆಸಿಕೊಂಡಾಗ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದು ಕೊಲ್ಲಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಹೇಳಿದರು.

ಮಾರುತಿ ದೇವರ ಓಕುಳಿ ಮಹೋತ್ಸವ ನಿಮಿತ್ತ ಗ್ರಾಮದ ಹನುಮಾನ ಮಂದಿರದ ಆವರಣದಲ್ಲಿ ಜೈ ಹನುಮಾನ ಯುವ ಮಿತ್ರ ಮಂಡಳಿ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಹಾಗೂ ಭಾರತೀಯ ಸಂಸ್ಕೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇಶಕ್ಕಾಗಿ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಛತ್ರಪತಿ ಶಿವಾಜಿ, ಸಂಭಾಜಿಯಂಥ ಅನೇಕ ಮಹಾರಾಜರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅಂಥವರ ತ್ಯಾಗ, ಬಲಿದಾನಗಳಿಂದಲೇ ಇಂದಿಗೂ ಭಾರತೀಯ ಸಂಸ್ಕೃತಿ ಉಳಿದಿದೆ. ನಾವು ಸುರಕ್ಷಿತವಾಗಿ ಬದುಕು ನಡೆಸುತ್ತಿದ್ದೇವೆ. ಅವರು ಉಳಿಸಿಕೊಟ್ಟ ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಲು ನಾವೂ ಬದ್ಧರಾಗಬೇಕು ಎಂದರು.

ಮರೇಗುದ್ದಿಯ ಡಾ.ನಿರುಪಾದೇಶ್ವರ ಶ್ರೀಗಳು ಮಾತನಾಡಿ, ಕಾಶ್ಮೀರದ ಮಂಗಳವಾರ ಧರ್ಮದ ಹೆಸರಿನಲ್ಲಿ ಅಮಾಯಕರ ಹತ್ಯೆ ನಡೆದಿದೆ. ಇದು ಅತ್ಯಂತ ಖಂಡನೀಯ. ಧರ್ಮದ ಮೇಲೆ ನಿರಂತರ ನಡೆಯುತ್ತಿರುವ ಇಂಥ ಆಕ್ರಮಣಗಳನ್ನು ತಪ್ಪಿಸಲು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡುವ ಜತೆಗೆ ಭಾರತೀಯರಾದ ನಾವೆಲ್ಲ ನಮ್ಮ ಧರ್ಮದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಮಕ್ಕಳಿಗೆ ಸನಾತನ ಧರ್ಮದ ತಿಳಿವಳಿಗೆ, ಆಚರಣೆಗಳ ಮಹತ್ವ ತಿಳಿಸಬೇಕು. ಮಕ್ಕಳು ಮೊಬೈಲ್ ದಾಸರಾಗದಂತೆ ಎಲ್ಲ ಪಾಲಕರೂ ಎಚ್ಚರಿಕೆ ವಹಿಸಬೇಕು ಎಂದರು.

ಶಿರೋಳದ ರಾಮಾರೂಢ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಜಾತ್ರೆ, ಉತ್ಸವಗಳು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. ವಿದೇಶಿ ವ್ಯಾಮೋಹದಿಂದ ಸ್ವದೇಶಿ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಚಿಕ್ಕಪಡಸಲಗಿ ಗ್ರಾಮದಲ್ಲಿ ಧರ್ಮ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದರು.

ಮುನ್ನ ಗ್ರಾಮದ ಬಬಲಾದಿಮಠದಿಂದ ಹನುಮಾನ ದೇವಸ್ಥಾನದವರೆಗೆ ಮೆರವಣಿಗೆ ಹಮ್ಮಿಕೊಳ್ಳುವ ಮೂಲಕ ಎಲ್ಲ ಸ್ವಾಮಿಗಳಿಗೆ ಭವ್ಯ ಸ್ವಾಗತ ಕೋರಲಾಯಿತು. ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ರಂಗೋಲಿ ಬಿಡಿಸಿ, ಪುಷ್ಪವೃಷ್ಟಿಯೊಂದಿಗೆ ಗ್ರಾಮಸ್ಥರು ಗುರುಗಳನ್ನು ಸ್ವಾಗತಿಸಿದರು. ಹನುಮ ದೇವರ ಅರ್ಚಕ ಹನಮಂತ ಪೂಜಾರಿ, ಬಬಲಾದಿಮಠದ ಶಿವರುದ್ರಯ್ಯ ಬಬಲಾದಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಗ್ರಾಮಸ್ಥರಾದ ಪರಮಗೊಂಡ ದಾನಗೌಡ, ಅಪ್ಪಾಸಾಬ ನ್ಯಾಮಗೌಡ, ಗುರಪಾದಯ್ಯ ಹಿರೇಮಠ, ಸುರೇಶ ದಾನಗೌಡ, ಸಿದ್ದಪ್ಪ ಮುತ್ತೂರ, ಬಸು ನ್ಯಾಮಗೌಡ, ವೆಂಕಪ್ಪ ಸಂತಿ, ಶ್ರೀಶೈಲ್ ಕಂಕಣವಾಡಿ, ಗಂಗಪ್ಪ ದಾನಗೌಡ, ಸದಾಶಿವ ಮಠೋಳಿ, ಲೋಹಿತ ಸಂತಿ, ಚೇತನ ಕಲ್ಯಾಣಿ, ಭರತೇಶ ಕಡಕೋಳ ಇದ್ದರು.

ಮಲ್ಲು ಪಟ್ಟಣಶೆಟ್ಟಿ ನಿರೂಪಿಸಿದರು. ಸುರೇಶ ಸಂತಿ ಸ್ವಾಗತಿಸಿದರು. ಎಸ್.ಆರ್.ಪವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net