ಜಿಲ್ಲೆಯ ಪ್ರತಿಯೊಬ್ಬರ ಶರೀರದಲ್ಲಿ ಕ್ರೀಡಾರಕ್ತ

ಜಿಲ್ಲೆಯ ಪ್ರತಿಯೊಬ್ಬರ ಶರೀರದಲ್ಲಿ ಕ್ರೀಡಾರಕ್ತ
Published on

ಹಿರಿಕರ ರವಿ ಸೋಮವಾರಪೇಟೆ

ಕ್ರೀಡೆಗೂ ಕೊಡಗಿಗೂ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬರ ಶರೀರದಲ್ಲಿ ಕ್ರೀಡಾರಕ್ತ ಹರಿಯುತ್ತಿದೆ. ಜಿಲ್ಲೆಯ ಯುವಕ-ಯುವತಿಯರು ಕನಿಷ್ಠ ಒಂದಾದರೂ ಆಟದಲ್ಲಿ ಪಳಗಿರುತ್ತಾರೆ ಎಂದು ಸೋಮವಾರಪೇಟೆ ಬ್ಲೂಸ್ಟಾರ್ ಹಾಕಿ ಕ್ಲಬ್‌ನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಹಾಕಿ ಆಟಗಾರ ಯಶವಂತ್ ಅಭಿಪ್ರಾಯಪಟ್ಟರು.

ಕನ್ನಡ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ಸೋಮವಾರಪೇಟೆ ಡಾಲ್ಫೀನ್ಸ್ ಸ್ಪಿರ್ಟ್ಸ್‌ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ, ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಕಿ ಮತ್ತು ಕೊಡಗು ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಆರೋಗ್ಯವಿದ್ದರೆ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ದಿನಕ್ಕೆ ಒಂದು ಗಂಟೆಯಾದರೂ ಸಮಯವನ್ನು ಕ್ರೀಡೆಗೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಾಥಮಿಕ, ಹೈಸ್ಕೂಲ್ ಹಂತದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿರುತ್ತೀರಿ. ಆದರೆ, ಕಾಲೇಜು ಹಂತಕ್ಕೆ ಬಂದಾಗ ಕ್ರೀಡೆ ಬಿಡಲೇಬಾರದು. ಎಂತಹ ಸಮಸ್ಯೆಯಿದ್ದರೂ ಆಟವನ್ನು ಮುಂದುವರಿಸಿ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ವಿಭಾಗದಲ್ಲಿ ಕ್ರೀಡಾಕೂಟಗಳು ನಡೆಯುತ್ತವೆ ಎಂದು ಕಿವಿಮಾತು ಹೇಳಿದರು.

ಕೊಡಗು ಹಾಕಿ ತವರು ಜಿಲ್ಲೆಯಾಗಿದೆ. ಕೊಡಗಿನ ಅನೇಕ ಜನರು ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದಾರೆ. ಬಿ.ಪಿ.ಗೋವಿಂದ, ಅರ್ಜುನ್ ಹಾಲಪ್ಪ, ಎಸ್.ವಿ.ಸುನೀಲ್ ಅತ್ಯದ್ಭುತ ಆಟಗಾರರಾಗಿ ದೇಶಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಆಟ ಕಲಿತ ಅನೇಕರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 1978ರಲ್ಲಿ ಹಾಕಿ ಆಟವನ್ನು ಬೆಳೆಸುವ ನಿಟ್ಟಿನಲ್ಲಿ ಬ್ಲೂಸ್ಟಾರ್ ಹಾಕಿ ಸಂಸ್ಥೆಯನ್ನು ಸ್ಥಾಪಿಸಿ, ಹಾಕಿ ಪ್ರತಿಭೆಗಳಿಗೆ ತರಬೇತಿ ನೀಡಲಾಯಿತು. ಬ್ಲೂಸ್ಟಾರ್ ತಂಡದಲ್ಲಿ ಆಟವಾಡಿದ 35ಜನ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಆಟವಾಡಿ, ಅಲ್ಲಿಯೇ ನೌಕರಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಎಚ್.ಎನ್.ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಮವಾರಪೇಟೆ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಆಟವಾಡಿದ ಅನೇಕರು ಹಾಕಿಯಲ್ಲಿ ಹೆಸರು ಮಾಡಿದ್ದಾರೆ. ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ತರಬೇತಿ ಪಡೆದ ನೂರರಷ್ಟು ವಿದ್ಯಾರ್ಥಿಗಳು ಇವತ್ತು ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಆಯ್ಕೆಯಾಗಿದ್ದಾರೆ. ಅನೇಕು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಾಕಿ ಆಟವಾಡುತ್ತಿದ್ದಾರೆ ಎಂದು ಹೇಳಿದರು. ವಚನ್ ಅಶೋಕ್, ಸೂರ್ಯ ಮೋಹನ್ ಜೂನಿಯರ್ ಇಂಡಿಯಾ, ಧೃತಿ ಸೋಮವಾರಪೇಟೆ ಜೂನಿಯರ್ ಇಂಡಿಯಾ ಆಟಗಾರರಾಗಿದ್ದಾರೆ.

ಯಾವುದೇ ಕ್ರೀಡೆಯಲ್ಲಿ ಸತತ ಪ್ರಯತ್ನದಿಂದ ಸಾಧನೆ ಮಾಡಿ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದರೆ ಸ್ಪೋರ್ಟ್ಸ್ ಕೋಟದಲ್ಲಿ ಸರ್ಕಾರಿ ಹುದ್ದೆ ಗ್ಯಾರೆಂಟಿ. ಯಾವುದೇ ಲಂಚ ಕೊಡಬೇಕಾದ ಅನಿವಾರ್ಯತೆ ಇಲ್ಲ. ಸರ್ಟಿಫಿಕೇಟ್ ಮೂಲಕ ನೇರವಾಗಿ ಆಯ್ಕೆಯಾಗುತ್ತಾರೆ. ಭಾರತ ತಂಡ ಮುನ್ನಡೆ ಆಟಗಾರರಾಗಿದ್ದ ಸೋಮವಾರಪೇಟೆಯ ಎಸ್.ವಿ.ಸುನೀಲ್ ಕೇಂದ್ರ ಸರ್ಕಾರದ ಎಕ್ಸೈಜ್‌ನಲ್ಲಿ ಡಿವೈಎಸ್‌ಪಿ ಆಗಿದ್ದಾರೆ. ಸೋಮವಾರಪೇಟೆ ಅರ್ಜುನ್ ಹಾಲಪ್ಪ ದೊಡ್ಡ ಹುದ್ದೆಯಲ್ಲಿದ್ದಾರೆ. ಬಿ.ಪಿ.ಗೋವಿಂದ ಅವರು ಅನೇಕ ಗೌರಯುತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net