

ಮಡಿಕೇರಿ: ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಪಡೆಯುವ ಹಕ್ಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಚ್‌ಐವಿ ಏಡ್ಸ್ ನಿಯಂತ್ರಣ ಕುರಿತು ಸರ್ಕಾರದ ಜತೆ ಸರ್ಕಾರೇತರ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಮಾನವನ ಹಕ್ಕು ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಪಡೆಯುವ ಹಕ್ಕಿದೆ. ಅದರಂತೆ ಎಚ್‌ಐವಿ ಸೋಂಕಿತರಿಗೆ ಯಾವುದೇ ಕಳಂಕ ತಾರತಮ್ಯ, ಲಿಂಗ ಭೇದ, ಎಚ್‌ಐವಿ ಸ್ಥಿತಿ ಮತ್ತಿತರವನ್ನು ಪರಿಗಣಿಸದೆ ಎಲ್ಲಾ ಆರೋಗ್ಯ ಸೇವೆಗಳು-ಎಚ್‌ಐವಿ ತಡೆ ಚಿಕಿತ್ಸೆ ಮತ್ತು ಆರೈಕೆ ಸೇವೆ ಒದಗಿಸಬೇಕು. ಅವರಿಗೂ ಕೂಡ ಎಲ್ಲಾ ಆರೋಗ್ಯದ ಸೇವೆಗಳನ್ನು ಪಡೆಯುವ ಹಕ್ಕಿದೆ ಎಂದ ಅವರು, ಪ್ರತಿಯೊಬ್ಬರ ಆರೋಗ್ಯದ ಹಕ್ಕನ್ನು ರಕ್ಷಿಸುವ ಮತ್ತು ಹೊಸ ಸೋಂಕುಗಳನ್ನು ಕಡಿಮೆ ಮಾಡುವ ಮೂಲಕ ಏಡ್ಸ್ ಮುಕ್ತ ಜನಾಂಗವನ್ನು ಸೃಷ್ಠಿಸಬಹುದು ಎಂದು ಹೇಳಿದರು.
ವಿಶ್ವ ಏಡ್ಸ್ ದಿನದ ಅರಿವು ಕಾರ್ಯಕ್ರಮಕ್ಕೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಉದ್ಘಾಟಿಸಿ ಮಾತನಾಡಿ, ಎಚ್‌ಐವಿ ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ಮುಂದಿರುವ ಸವಾಲುಗಳ ಬಗ್ಗೆ ಚಿಂತಿಸುವ ದಿನ ಇದಾಗಿದೆ ಎಂದರು.
ವಿಶ್ವ ಏಡ್ಸ್ ದಿನ ಪ್ರಯುಕ್ತ ಜಾಥಾವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಪ್ರಶಾಂತಿ.ಜಿ ಅವರು ಉದ್ಘಾಟಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್.ಎನ್, ಲಯನ್ಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ಅಧ್ಯಕ್ಷರು ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ ಇತರರು ಇದ್ದರು.
ಜಾಥಾದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಎಫ್.ಎಮ್.ಕೆ.ಎಮ್.ಸಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಬಿ.ಎಸ್ಸಿ. ನರ್ಸಿಂಗ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಡಗು, ಸರ್ಕಾರಿ ಮಹಿಳಾ ಕಾಲೇಜು ಮಡಿಕೇರಿ ಭಾಗವಹಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಿ.ಎಸ್ಸಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಮಂಜುಳ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್, ವೈದ್ಯಾಧಿಕಾರಿ ಡಾ.ನೀರಜ್ ಇದ್ದರು. ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಸುನೀತ ಮುತ್ತಣ್ಣ ಸ್ವಾಗತಿಸಿದರೆ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ ವಂದಿಸಿದರು.