

ಬೇಲೂರು: ಆರೋಗ್ಯ ಇಲಾಖೆಯ ಆಯುಷ್ಮಾನ್ ಅಭಿಯಾನದ ಆರೋಗ್ಯ ಕಾರ್ಡ್ ಪಡೆದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಆಯುಷ್ಮಾನ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆಯಸ್ಸು 100 ರಿಂದ 50ಕ್ಕೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯವಂತನೇ ಸಿರಿವಂತ ಎಂದು ಹೇಳಬಹುದು. ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಖರ್ಚು ಮಾಡಲು ಹಣವಿಲ್ಲದೆ ಸಾಕಷ್ಟು ಜನರು ಮೃತಪಟ್ಟಿರುವ ಘಟನೆಗಳನ್ನು ದಿನನಿತ್ಯ ನೋಡುತಿದ್ದೇವೆ. ಹೀಗಾಗಿ ಆಯುಷ್ಮಾನ್ ಯೋಜನೆ ಜಾರಿಗೆ ತಂದಿದ್ದು, ಆರೋಗ್ಯ ಕಾರ್ಡ್ ನೋಂದಾಣಿ ಮಾಡಿಸಿಕೊಳ್ಳಬೇಕು. ಜತೆಗೆ ಈ ಯೋಜನೆಯಲ್ಲಿನ ಲಾಭವನ್ನು ಜನರಿಗೆ ತಿಳಿಸಲು, ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಆಯುಷ್ಮಾನ್ ಯೋಜನೆ ಆರೋಗ್ಯಕ್ಕೆ ಸಂಬಂಧಿಸಿದಂತೆ 5 ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಯೋಜನೆಯ ಆರೋಗ್ಯ ಕಾರ್ಡ್ ಪಡೆದುಕೊಂಡವರಿಗೆ ಸರ್ಕಾರ 5 ಲಕ್ಷ ರೂ. ವರೆಗೆ ಚಿಕಿತ್ಸೆಗೆ ಖರ್ಚು ಬರಿಸುತ್ತದೆ. ಈ ಯೋಜನೆಯಡಿ ಸಾರ್ವಜನಿಕರ ಪ್ರತಿ ಮನೆ ಬಾಗಿಲಿಗೆ ಸಿಬ್ಬಂದಿ ತೆರಳಿ ನೋಂದಣಿ ಮಾಡುವುದಕ್ಕೆ ಸರ್ಕಾರ ಆದೇಶಿಸಿದೆ. ಅಲ್ಲದೆ ಪ್ರತಿ ಮಂಗಳವಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ. ಇದರೊಂದಿಗೆ ಕ್ಷಯ ರೋಗ ನಿಯಂತ್ರಣಕ್ಕೆ ಸಾಕಷ್ಟು ಯೋಜನೆ ರೂಪಿಸಿದೆ ಎಂದರು.
ಕ್ಷಯ ರೋಗಿಗಳಿಗೆ ಆರು ತಿಂಗಳು ಪೌಷ್ಟಿಕ ಆಹಾರ ನೀಡಲು ಹಣ ಸಹಾಯ ಮಾಡಿರುವ ಅರೇಹಳ್ಳಿ ರೋಟರಿ ಸಂಸ್ಥೆ ಅಧ್ಯಕ್ಷ ಪೃಥ್ವಿ, ಇಬ್ಬಿಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿನ್, ಹಗರೆ ಗ್ರಾಮದ ಆಶಾ ಕಾರ್ಯಕರ್ತೆ ಸೌಜನ್ಯಾ ಅವರನ್ನು ಸನ್ಮಾನಿಸಲಾಯಿತು. ಉಪ ತಹಸೀಲ್ದಾರ್ ತನ್ವೀರ್ ಅಹಮ್ಮದ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸತೀಶ್, ತಾಲೂಕು ಆರೋಗ್ಯ ನೀರಿಕ್ಷಣಾಧಿಕಾರಿ ದಯಾನಂದ್, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಬಿಆರ್‌ಸಿ ಶಿವಮರಿಯಪ್ಪ, ಪುರಸಭೆ ಸದಸ್ಯೆ ಉಷಾ ಇತರರಿದ್ದರು.