ಕನಕದಾಸರ ಚಿಂತನೆ ಪ್ರತಿಯೊಬ್ಬರೂ ಅನುಸರಿಸಿ

mysore
Published on

ಮೈಸೂರು: 15ನೇ ಶತಮಾನದಲ್ಲೇ ಸಂತಕವಿ, ದಾಸಶ್ರೇಷ್ಠ ಕನಕದಾಸರು ಕೋಮು ಸೌಹಾರ್ದ ಸಾರಿದ್ದಾರೆ. ಅದನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಕನಕದಾಸರ ಜಯಂತ್ಯುತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ 536ನೇ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕನಕದಾಸರು ‘ನಾನು ಹೋದರೆ ಹೋದೇನು’ ಎಂಬ ಮಾತಿನ ಮೂಲಕ ಮನುಷ್ಯರಲ್ಲಿರುವ ನಾನತ್ವ, ಅಹಂ ದೂರವಾಗಬೇಕು ಎಂಬ ಸಂದೇಶ ಸಾರಿದ್ದಾರೆ. ಈ ನೆಲ, ಜಲ, ಗಾಳಿ ಎಲ್ಲರಿಗೂ ಒಂದೇ ಆಗಿರುವಾಗ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಅವಶ್ಯಕತೆ ಇಲ್ಲ ಎಂಬ ಅಂಶದ ಜತೆಗೆ, ಕೋಮು ಸೌಹಾರ್ದತೆಯ ಸಂದೇಶ ಕೊಟ್ಟಿದ್ದಾರೆ. ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದುಹಾಕಿ ಸಮಸಮಾಜ ನಿರ್ಮಾಣವೇ ಸಂತಕವಿ ಕನಕದಾಸರ ಆಶಯವಾಗಿತ್ತು ಎಂದರು.


ಕನ್ನಡ ಸಾಹಿತ್ಯ ಚಳವಳಿ ಮೂಲಕ ಸಮಾಜದ ಭಿನ್ನಾಭಿಪ್ರಾಯವನ್ನು ತೊಡೆದುಹಾಕುವಲ್ಲಿ ಹೋರಾಡಿದ ಕನಕದಾಸರು, ಕನ್ನಡ ಸಾಹಿತ್ಯದಲ್ಲೇ ಕೀರ್ತನೆ, ಕಾವ್ಯಗಳ ಮೂಲಕ ಸಾಮಾಜಿಕ ಸಂದೇಶ ಸಾರಿದ್ದಾರೆ. ಅವರ ನಳಚರಿತ್ರೆ ಸಾಹಿತ್ಯವು ಜೀವನದ ಕಷ್ಟ-ಸುಖ, ಸಮಸ್ಯೆ ಹಾಗೂ ಕೂಡುಬಾಳಿನ ಮಹತ್ವವನ್ನು ಹೇಳುತ್ತದೆ. ಹಾಗೆಯೆ, ರಾಮಧಾನ್ಯ ಚರಿತ್ರೆಯು ಎರಡು ಧಾನ್ಯಗಳನ್ನು ಮುಂದಿರಿಸಿಕೊಂಡು ಸಮಾಜದಲ್ಲಿನ ಭೇದವನ್ನು ಇತರ ತಾರತಮ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.


ಬಸವಾದಿ ಶರಣರಿಂದ ಸಮಾಜದ ಬದಲಾವಣೆಯ ಪ್ರಯತ್ನವಾಗಿದ್ದು, ದಾಸ ಸಾಹಿತ್ಯ ತನ್ನ ಭಕ್ತಿ ಪಂಥದ ಮೂಲಕ ಸಮಾಜದ ಬದಲಾವಣೆಗೆ ಮತ್ತಷ್ಟು ಒತ್ತು ನೀಡಿದೆ ಎಂದರು.


ಕನಕ ಪೀಠವು ಸಮಾಜ ಸುಧಾರಕರ ಧಾರ್ಮಿಕ ಕೇಂದ್ರವಾಗಿ ರೂಪುಗೊಳ್ಳಬೇಕು. ದಾಸ ಸಾಹಿತ್ಯದ ಮೂಲಕ ಸಮಾಜದ ಕೊಳಕನ್ನು ತೊಳೆಯಲು ಯತ್ನಿಸಿದ ಕನಕರ ಜಯಂತಿ ಆಚರಣೆಯು ಮನುಕುಲದ ಉದ್ಧಾರಕ್ಕೆ ಶ್ರೇಯಸ್ಸು ಎಂದು ಅಭಿಪ್ರಾಯಪಟ್ಟರು.


ಕನಕದಾಸರು ಹಿಮಾಲಯದಷ್ಟು ಎತ್ತರದಲ್ಲಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಬದ್ಧತೆ ಪ್ರದರ್ಶಿಸುತ್ತಿದ್ದಾರೆ. ಜಾತಿ ವಿಷಯ ಬಂದಾಗ ನಾವು ಅಲ್ಲಿನ ಇಸಂ ಅನ್ನು ವಿರೋಧಿಸಬೇಕೇ ಹೊರತು ಯಾವುದೇ ಜಾತಿ ಅಥವಾ ಧರ್ಮವನ್ನಲ್ಲ. ಅಧಿಕಾರದಲ್ಲಿರುವವರು ಆಡಳಿತಾತ್ಮಕ ವಿಚಾರಗಳಲ್ಲಿ ಜಾತಿ ಅಥವಾ ಧರ್ಮ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳುವುದೇ ನಿಜವಾದ ಜಾತ್ಯತೀತತೆಯಾಗಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಸಂವಿಧಾನ ಬರೆಯುವಾಗ ಕನಕದಾಸರು, ಪುರಂದರದಾಸರು, ಸರ್ವಜ್ಞ ಇವರೆಲ್ಲರನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಚೆನ್ನಾಗಿ ಓದಿಕೊಂಡಿದ್ದರು. ನಾವೆಲ್ಲರೂ ಭಾವೈಕ್ಯತೆಯ ಸಾರವನ್ನು ಮರೆತಿದ್ದೇವೆ. ಆದರೆ ಭಾವೈಕ್ಯದಲ್ಲಿ ಭಕ್ತಿಯ ಸಂಗಮವೇ ಕನಕದಾಸರಾಗಿದ್ದಾರೆ ಎಂದರು.


ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿದರು.

ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆಎಂ ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ.ಸುದರ್ಶನ್, ಕನಕದಾಸರ ಜಯಂತೋತ್ಸವ ಆಚರಣೆ ಸಮಿತಿಯ ಅಧ್ಯಕ್ಷ ಎಂ.ಕೆ ಸೋಮಶೇಖರ್ ಸೇರಿದಂತೆ ಇನ್ನಿತರರಿದ್ದರು.

ಗಮನ ಸೆಳೆದ ಮೆರವಣಿಗೆ


ಕನಕದಾಸರ ಜಯಂತಿ ಅಂಗವಾಗಿ ನಗರದಲ್ಲಿ ಜರುಗಿದ ಮೆರವಣಿಗೆ ಗಮನ ಸೆಳೆಯಿತು. ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳ ಪ್ರದರ್ಶನ ಮೆರುಗು ನೀಡಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಕೆ.ಆರ್. ವೃತ್ತ, ಡಿ.ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ವೃತ್ತದ ಮೂಲಕ ಕಲಾಮಂದಿರ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net