

ಹುಬ್ಬಳ್ಳಿ : ವಾಹನ ಚಲಾಯಿಸುವಾಗ ಸಂಚಾರ ದೀಪಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ. ಹೇಳಿದರು.
ಇಲ್ಲಿಯ ವಿದ್ಯಾನಗರದ ಬಿವಿಬಿ ಕಾಲೇಜ್ ಬಳಿ ಹುಬ್ಬಳ್ಳಿ -ಧಾರವಾಡ ನಗರ ಸಾರಿಗೆ ವಿಭಾಗ, ಪ್ರಾದೇಶಿಕ ಸಾರಿಗೆ ಕಚೇರಿ, ಪೊಲೀಸ್ ಇಲಾಖೆ ಹಾಗೂ ಬಿವಿಬಿ ಕಾಲೇಜಿನ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಸುಮಾರು 4.68 ಲಕ್ಷ ರಸ್ತೆ ಅಪಘಾತಗಳಾಗಿದ್ದು, ಈ ಅಪಘಾತಗಳಿಂದ ಸುಮಾರು 1.68 ಲಕ್ಷ ಜನ ಮೃತಪಟ್ಟಿದ್ದಾರೆ. ಸುಮಾರು 4.53 ಲಕ್ಷ ಜನ ಗಾಯಾಳುಗಳಾಗಿದ್ದಾರೆ. ಗಾಯಾಳುಗಳಿಗೆ ಅವರು ಕುಟುಂಬಕ್ಕೆ ಗಳಿಸುತ್ತಿದ್ದ ಆದಾಯದ ಲೆಕ್ಕಾಚಾರದಲ್ಲಿ ಅಪಘಾತ ಪರಿಹಾರವನ್ನು ದೊರಕಿಸಿ ಕೊಡಲಾಗುತ್ತಿದೆ. ಆದರೆ, ಕುಟುಂಬಕ್ಕೆ ಆಸರೆಯಾದ ಜೀವ ಇಲ್ಲ ಎಂಬ ಕೊರಗು ಅವರಿಗೆ ಕಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ತಂತ್ರಜ್ಞಾನ ಸಾಕಷ್ಟು ಬೆಳೆವಣಿಗೆ ಹೊಂದಿದರು ಸಹ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರು ವಾಹನ ಓಡಿಸುವಾಗ ಜಾಗರೂಕತೆ ವಹಿಸಬೇಕು ಎಂದು ತಿಳಿಸಿದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರಕಾಶ ತೇವರಿ ಮಾತನಾಡಿ, ವಿದ್ಯಾರ್ಥಿಗಳು ಬೈಕ್ ಚಲಾಯಿಸುವಾಗ ಎಚ್ವರಿಕೆ ವಹಿಸಬೇಕು. ಅವಸರದ ಪ್ರಯಾಣ ಪ್ರಾಣ ಹಾನಿಗೆ ಕಾರಣವಾಗುತ್ತದೆ. ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಮಾತನಾಡಿ, ಪ್ರತಿಯೊಬ್ಬ ನಾಗರಿಕ ರಸ್ತೆ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ವಾಹನ ಓಡಿಸುವಾಗ ವೇಗದ ಮಿತಿ ನಿಯಂತ್ರಣದಲ್ಲಿ ಇರಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂದರು.
ಸಹಾಯಕ ಪೊಲೀಸ್ ಆಯುಕ್ತ ವಿನೋದ ಮುಕ್ತೆದಾರ ಮಾತನಾಡಿ, ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಬಾರದು. ಜೀವ ಅಮೂಲ್ಯವಾಗಿದ್ದು, ಅದನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಬಿವಿಬಿ ಕಾಲೇಜ್ ಬಳಿಯ ಬಿಆರ್ಟಿಎಸ್ ಪಾಸ್ ಪಾಯಿಂಟ್ನಿಂದ ಕೋತಂಬ್ರಿ ಕಾಲೇಜಿನ ವೃತ್ತದವರೆಗೆ ರಸ್ತೆ ಸುರಕ್ಷತಾ ಜಾಥಾ ನಡೆಯಿತು.
ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಹುಬ್ಬಳ್ಳಿ -ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ಧಲಿಂಗೇಶ, ಎಸ್.ಡಿ. ಬೆಲ್ಲದ, ಜಿ.ವಿ. ದಿನಮಣಿ, ಗುರುಪ್ರಸಾದ, ಅಬ್ದುಲ್ ಸಲಾಂ ಧಾರವಾಡವಾಲೆ, ಶಂಕರ ಕಲಾಲ, ಗೃಹ ರಕ್ಷಕದಳ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಭಾಗವಹಿಸಿದ್ದರು.
ಬಿವಿಬಿ ಕಾಲೇಜಿನ ಪ್ರಾಧ್ಯಾಪಕಿ ರಂಜಿತಾ ನಿರೂಪಿಸಿ, ವಂದಿಸಿದರು.