

ಹೊಸಪೇಟೆ: ಆಹಾರ ಧಾನ್ಯಗಳ ಬೆಲೆ ನಿಯಂತ್ರಣ ಹಾಗೂ ನಿರುದ್ಯೋಗಿಗಳಿಗೆ ಮಾಸಿಕ 10 ಸಾವಿರ ರೂ. ಭತ್ಯೆ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ವಿಶ್ವಜೀತ್ ಮೆಹತಾಗೆ ಮನವಿ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭೆ ಚುನಾವಣೆ ವೇಳೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತರುವುದು, ಎಲ್ಲ ನಾಗರಿಕರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು 9 ವರ್ಷವಾದರೂ ಘೋಷಣೆಗಳು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಉದ್ಯೋಗ ನಷ್ಟದಿಂದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಆಹಾರ ಧಾನ್ಯ, ಔಷಧ, ಪೆಟ್ರೋಲ್, ಡೀಸೆಲ್ ದರ ಏರಿಕೆ ನಿಯಂತ್ರಿಸಬೇಕು.
ಖಾಲಿ ಇರುವ 60 ಲಕ್ಷಕ್ಕೂ ಅಧಿಕ ಹುದ್ದೆ ಭರ್ತಿ ಮಾಡಬೇಕು. ಇಲ್ಲವೇ ನಿರುದ್ಯೋಗಿಗಳಿಗೆ ಮಾಸಿಕ 10 ಸಾವಿರ ರೂ. ಭತ್ಯೆ ನೀಡಬೇಕು.
ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಗೆ 5 ಕೆಜಿ ಅಕ್ಕಿ ನೀಡಬೇಕು. ರಾಜ್ಯಕ್ಕೆ ನೀಡುವ ತೆರಿಗೆ ಪಾಲು ಹೆಚ್ಚಿಸಿ ಜಿಎಸ್‌ಟಿ ಬಾಕಿ ಪಾವತಿಸಬೇಕು. ಬಡವರಿಗೆ ನಿವೇಶನ ಸಹಿತ ಮನೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ, ತಾಲೂಕು ಕಾರ್ಯದರ್ಶಿ ವಿ.ಸ್ವಾಮಿ, ಪ್ರಮುಖರಾದ ಮರಡಿ ಜಂಬಯ್ಯ ನಾಯಕ, ಎಂ.ಗೋಪಾಲ, ಕೆ.ನಾಗರತ್ನಮ್ಮ, ಶಕುಂತಲಮ್ಮ, ಎನ್.ಯಲ್ಲಾಲಿಂಗ, ರಮೇಶ್ ಕುಮಾರ್ ಇದ್ದರು.