

ಅಳವಂಡಿ: ಜನಪ್ರತಿನಿಧಿಗಳು ಹಾಗೂ ಊರಿನ ಮುಖಂಡರ ಸಹಕಾರ ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ನೂತನ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ತಿಳಿಸಿದರು.
ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಎರಡನೇ ಅವಧಿಯ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗ್ರಾಮದಲ್ಲಿ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಸರಿಪಡಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದ ಅವರು, ಬೀದಿದೀಪಗಳ ನಿರ್ವಹಣೆ, ಸ್ವಚ್ಛತೆ, ಶುದ್ಧ ಕುಡಿವ ನೀರು ಪೂರೈಕೆ, ನರೇಗಾ ಯೋಜನೆ ಸಮರ್ಪಕ ಜಾರಿಗೆ ಆದ್ಯತೆ ನೀಡಲಾಗುವುದು ಎಂದರು.
ಪಿಡಿಒ ಬಸವರಾಜ ಕೀರ್ದಿ, ಎಸ್‌ಡಿಎಎ ಕೊಟ್ರಪ್ಪ ಅಂಗಡಿ, ಗ್ರಾಪಂ ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಭಾರತಿ ಬೆಣಕಲ್, ಸುವರ್ಣಾ ಅರಳೆಲೆಮಠ, ಶಶಿಕಲಾ ನಾಗರಹಳ್ಳಿ, ರೇಣುಕಾ ರಡ್ಡಿ, ಹನುಮವ್ವ ವಡ್ಡರ, ಗವಿಸಿದ್ದಪ್ಪ ಭಜಂತ್ರಿ, ಮಂಜುನಾಥ ಬೆದವಟ್ಟಿ ಮತ್ತಿತರರಿದ್ದರು.