

ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ಶಂಕುಸ್ಥಾಪನೆಗೊಂಡ ಜಿಲ್ಲಾಸ್ಪತ್ರೆ ಶ್ರೀ ಆರಂಭಕ್ಕೆ ಎಲ್ಲರೂ ಹೋರಾಟ ಮಾಡಬೇಕು ಎಂದು ಕರವೇ ಪ್ರವಿಣ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ರಾಜಟ್ಟ ರವಿ ತಿಳಿಸಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಶಂಕುಸ್ಥಾಪನೆಗೊಂಡ ಜಿಲ್ಲಾಸ್ಪತ್ರೆ ಉಳಿವಿಗಾಗಿ ಹಮ್ಮಿಕೊಂಡಿರುವ ಹೋರಾಟದ ರೂಪುರೇಷೆ ಬಗ್ಗೆ ವಿವಿಧ ಸಂಟನೆಗಳು ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ದೊಡ್ಡಬಳ್ಳಾಪುರದಲ್ಲಿ 2023ರಲ್ಲಿ ಜಿಲ್ಲಾಸ್ಪತ್ರೆಗೆ ಅನುಮೋದನೆ ನೀಡಿದ್ದು, 2024ರಲ್ಲಿ ಸಿದ್ದನಾಯಕನಹಳ್ಳಿಯಲ್ಲಿ 9 ಎಕರೆ 38 ಕುಂಟೆ ಜಮೀನಿನಲ್ಲಿ 192 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಯಿತು. ಆದರೆ ಈವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕು ಆಸ್ಪತ್ರೆಗೆ ಪ್ರತಿದಿನ 1,500 ರೋಗಿಗಳು ಒಪಿಡಿಗೆ ಬರುತ್ತಾರೆ. ಇದಲ್ಲದೆ ತಿಂಗಳಿಗೆ 200ಕ್ಕೂ ಹೆಚ್ಚು ಹೆರಿಗೆ ಆಗುತ್ತದೆ. ಇದರಿಂದ ಜಿಲ್ಲಾಸ್ಪತ್ರೆ ಅಗತ್ಯವಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಜಿಲ್ಲಾಸ್ಪತ್ರೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ 250 ಹಾಸಿಗೆಯ ಜಿಲ್ಲಾಸ್ಪತ್ರೆ ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ, ತಾಲೂಕಿನಲ್ಲಿ ಆಗಬೇಕಿದ್ದ ಜಿಲ್ಲಾಡಳಿತ ಭವನ ದೇವನಹಳ್ಳಿಗೆ ಹಾಗೂ ಕೆಎಸ್ಆರ್ಟಿಸಿ ಬಸ್ ಡಿಪೋ ಚಿಕ್ಕಬಳ್ಳಾಪುರಕ್ಕೆ ಹೋಗಿದೆ. ಈಗ ಜಿಲ್ಲಾಸ್ಪತ್ರೆಯೂ ಇದೇ ರೀತಿ ಆಗುವ ಸಾಧ್ಯತೆಯಿದೆ. ಇದಕ್ಕಾಗಿ 250 ಹಾಸಿಗೆಯ ಜಿಲ್ಲಾಸ್ಪತ್ರೆ ದೊಡ್ಡಬಳ್ಳಾಪುರದಲ್ಲಿ ಸ್ಥಾಪನೆ ಆಗಬೇಕು. ನಮಗೆ ಜಿಲ್ಲಾಸ್ಪತ್ರೆ ಬೇಕೇ ಬೇಕು. ಜತೆಗೆ ಇಎಸ್ಐ ಆಸ್ಪತ್ರೆ ನಿರ್ಮಾಣವಾದರೂ ಉದ್ಘಾಟನೆ ಮಾಡಲು ಬಿಡುತ್ತಿಲ್ಲ. ಚಳವಳಿ ಹೋರಾಟದ ಮೂಲಕ ಜಿಲ್ಲಾಸ್ಪತ್ರೆ ಪಡೆಯಬೇಕು. ಮೊದಲ ಹಂತದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾಹಿತಿ ಪಡೆದು ಹೋರಾಟಕ್ಕೆ ರೂಪುರೇಷೆ ಮಾಡಬೇಕು ಎಂದರು.