

ಹಗರಿಬೊಮ್ಮನಹಳ್ಳಿ: ಪಟ್ಟಣದ ಜೆಸಿಐ ಸನ್ ಫ್ಲವರ್ ತಾಲೂಕು ಘಟಕ, ಸರ್ಕಾರಿ ಆಸ್ಪತ್ರೆ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಜೆಸಿಐ ಮಾಜಿ ಅಧ್ಯಕ್ಷ ವೆಂಕಟೇಶ್ ಮರಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಣ್ಣಿನ ಬಗ್ಗೆ ಕಾಳಜಿ ಇರಬೇಕು. ಇಂತಹ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ತಾಲೂಕು ಆಸ್ಪತ್ರೆ ವೈದ್ಯ ಶರತ್ ಕುಮಾರ್ ಮಾತನಾಡಿ, ಕಣ್ಣಿಗೆ ಹಾನಿಯಾದರೆ ಇನ್ನೊಬ್ಬರನ್ನು ಆಶ್ರಯಿಸಬೇಕಾಗುತ್ತೆ. ಆದ್ದರಿಂದ ಕಣ್ಣನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಮರಣದ ನಂತರ ನೇತ್ರದಾನ ಮಾಡಿ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ ಎಂದರು.
ತಾಲೂಕು ಅಧ್ಯಕ್ಷ ದಿವಾಕರ್ ಹಿರೇಗೌಡ್ರು ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರಗಳನ್ನು ಜೆಸಿಐ ಆಗಾಗ ನಡೆಸುತ್ತದೆ. ಸಾರ್ವಜನಿಕರು ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. 160 ಜನ ತಪಾಸಣೆಗೊಳಗಾಗಿದ್ದು, ಶಸ್ತ್ರ ಚಿಕಿತ್ಸೆಗೆ 80ಜನ ಆಯ್ಕೆಯಾಗಿದ್ದಾರೆ ಎಂದು ಜೆಸಿಐ ಅಧ್ಯಕ್ಷ ದಿವಾಕರ ತಿಳಿಸಿದರು. ಸದಸ್ಯರಾದ ಸದಾನಂದ, ಭದ್ರವಾಡಿ ವಿನಾಯಕ, ಮಲ್ಲಿಕಾರ್ಜುನ, ವಿಶ್ವನಾಥ ಇತರರು ಇದ್ದರು.