

ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ ಒಂದು ದೊಡ್ಡ ಶಕ್ತಿಯಾಗಿದ್ದರು. ಅವರ ವಿಚಾರವನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ಜಿಲ್ಲಾಕಾರಿ ಮೊಹಮ್ಮದ್ ರೋಷನ್ ಹೇಳಿದರು.
ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಚಾರವಾದಿ ಭೀಮಪುತ್ರ ಸಂತೋಷ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಸಾಧನೆಗಳ ಕುರಿತು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ನಿಜವಾದ ಅಗ್ರಗಣ್ಯ ನಾಯಕರಾಗಿದ್ದಾರೆ. ಅಂಬೇಡ್ಕರ್ ಅವರು ಪುತ್ಥಳಿಯಲ್ಲಿ ಇಲ.್ಲ ಅವರು ಪುಸ್ತಕದಲ್ಲಿದ್ದು, ಅವರನ್ನು ಅರಿತುಕೊಳ್ಳಲು ಪ್ರತಿಯೊಬ್ಬರೂ ಸಂವಿಧಾನ ಓದಬೇಕು ಎಂದು ಕರೆ ನೀಡಿದರು.
ಬಾಬಾಸಾಹೇಬರು ಅವರು ಸಂವಿಧಾನ ಪೀಠಿಕೆ ಬರೆಯುವಂತಹ ಸಂದರ್ಭದಲ್ಲಿ ಭಾರತದ ನಾಗರಿಕರಾದ ನಾವು ಎಂಬ ಪದ ಬಳಸುವುದರ ಮೂಲಕ ದೇಶದ ಐಕ್ಯತೆಗೆ ಪ್ರಾಮುಖ್ಯ ನೀಡಿದರು ಎಂದು ತಿಳಿಸಿದರು.
ಬಾಬಾಸಾಹೇಬರಿಗೆ ಹಣ ಮತ್ತು ಸಂಪತ್ತು ಮುಖ್ಯವಾಗಿರಲಿಲ್ಲ. ಅವರಿಗೆ ದೇಶದ ಜನರ ಭವಿಷ್ಯವೇ ಪ್ರಮುಖವಾಗಿತ್ತು. ಆದ್ದರಿಂದ ಬಾಬಾಸಾಹೇಬರನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ ಅವರನ್ನು ಹಾಗೂ ಅವರ ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.
ಮಹಾನಗರ ಪಾಲಿಕೆ ಮಹಾಪೌರ ಮಂಗೇಶ ಪವಾರ, ಉಪ ಮಹಾಪೌರ ವಾಣಿ ವಿಲಾಸ ಜೋಶಿ, ನಗರ ಸೇವಕರಾದ ಶ್ರೇಯಸ್, ಜಯತೀರ್ಥ, ಸಿದ್ದರಾಯ ಮೇತ್ರಿ, ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಇತರರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೋಳಿ ಸ್ವಾಗತಿಸಿದರು. ಹನುಮಂತ ಪೂಜಾರ ಸಂವಿಧಾನದ ಪ್ರಸ್ತಾವನೆ ವಾಚಿಸಿದರು. ಬೌದ್ಧ ಮಹಾಸಭಾ ಅಧ್ಯಕ್ಷ ಯಮನಪ್ಪ ಗಡಿನಾಯಕ ಬೌದ್ಧ ಮಹಾಸಭಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿ ಧನರಾಜ ತಳವಾರ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.