

ಮೈಸೂರು: ಪ್ರತಿಯೊಬ್ಬ ಶಿಕ್ಷಕನಿಗೂ ವೃತ್ತಿಯ ಬಗ್ಗೆ ಪ್ರೀತಿ ಮತ್ತು ಗೌರವ ಇರಬೇಕು. ತಾವು ಮಾಡುವ ಕೆಲಸದಲ್ಲಿ ನಲಿವನ್ನು ಕಾಣಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಕೆ.ಮಂಟೇಲಿಂಗು ಹೇಳಿದರು.
ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಐಕ್ಯುಎಸಿ ವತಿಯಿಂದ ಆಯೋಜಿಸಿದ್ದ ಅಧ್ಯಾಪಕರ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕವೇ ಕೈಲಾಸ ಎಂದು ಭಾವಿಸಬೇಕು. ನಿರ್ವಹಿಸುವ ಕೆಲಸದಲ್ಲಿ ಶಿಸ್ತಿರಬೇಕು, ಇಲ್ಲದಿದ್ದರೆ ಏನನ್ನು ಸಾಧಿಸಲು ಅಸಾಧ್ಯ. ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥವಾಗಿ ಕಳೆಯದೆ ಸಮರ್ಪಕವಾಗಿ ಬಳಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಅಧ್ಯಾಪಕರು ಬೋಧನಾ ನೈಪುಣ್ಯತೆ ಜತೆಯಲ್ಲಿ ವಿಷಯದ ಪ್ರಾವೀಣ್ಯತೆ ಪಡೆಯಬೇಕು. ಸಂಶೋಧನಾ ಸಾಮರ್ಥ್ಯ ಮತ್ತು ತಾಂತ್ರಿಕ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ನವೀನ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಪ್ರಸ್ತುತ ಕಾರ್ಯಕ್ರಮದಿಂದ ಅಧ್ಯಾಪಕರ ಕೌಶಲ ಮತ್ತಷ್ಟು ವೃದ್ಧಿಸುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ಎಂ.ಪ್ರಭು, ಐಕ್ಯುಎಸಿ ಸಂಯೋಜಕರಾದ ಡಾ. ಎನ್.ರಾಜೇಂದ್ರ ಪ್ರಸಾದ್, ಇಂಗ್ಲಿಷ್ ವಿಭಾಗದ ಅಧ್ಯಾಪಕಿ ಕೆ. ಎನ್. ಮಂಜುಳಾ, ಸಸ್ಯಶಾಸತ್ರ ವಿಭಾಗದ ಅಧ್ಯಾಪಕಿ ಡಾ. ಜಿ.ಎಂ. ಸಿಂಧು ಇತರರು ಇದ್ದರು.