ಪ್ರತಿ ಸಮಸ್ಯೆಗಳಿಗೂ ವಚನಗಳಲ್ಲಿದೆ ಪರಿಹಾರ

03 ARKERA 01
ಅರಕೇರಾ ಸಮೀಪದ ಜಾಗೀರ ಜಾಡಲದಿನ್ನಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಚನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಸವ ಸುಧೆ ವಚನ ಪುಸ್ತಕ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ನೀಲಾಂಬಿಕಾ ಬಸವ ಯೋಗಾಶ್ರಮದ ಅಧ್ಯಕ್ಷ ವೀರಭದ್ರಯ್ಯ ಸ್ವಾಮೀಜಿ, ಎಸ್ಡಿಎಂಸಿ ಅಧ್ಯಕ್ಷ ದೇವಪ್ಪ ನಾಯಕ, ವಿಶ್ವ ವಚನ ಫೌಂಡೇಷನ್ ಜಿಲ್ಲಾ ಅಧ್ಯಕ್ಷ ಬೆಟ್ಟಪ್ಪ ಕಸ್ತೂರಿ, ಜಿಲ್ಲಾ ಗೌರವಾಧ್ಯಕ್ಷೆ ದೇವಿಂದ್ರಮ್ಮ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೂದಿನಾಳ, ಪ್ರಮುಖರಾದ ಅಮರಗುಂಡಪ್ಪ, ಚನ್ನಬಸವ ಇತರರಿದ್ದರು.
Published on

ಅರಕೇರಾ: ಜನಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳನ್ನು ವಚನಕಾರರು ವಚನಗಳ ಮೂಲಕ ಮಾರ್ಮಿಕವಾಗಿ ತಿಳಿಸಿದ್ದಾರೆ ಎಂದು ನೀಲಾಂಬಿಕಾ ಬಸವ ಯೋಗಾಶ್ರಮದ ಅಧ್ಯಕ್ಷ ವೀರಭದ್ರಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶರಣು ವಿಶ್ವ ವಚನ ಫೌಂಡೇಷನ್ ಮೈಸೂರು ವತಿಯಿಂದ ಆಯೋಜಿಸಿದ್ದ ವಚನಗಳ ನಡೆ, ಶಾಲೆ ಕಡೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು. ವಚನ ಎಂದರೆ ಪ್ರಮಾಣ ಅಥವಾ ಕೊಟ್ಟ ಮಾತು ಎಂದರ್ಥ. ವಚನಗಳಲ್ಲಿ ಜೀವನದ ಪ್ರತಿ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದರು.

ಶರಣು ವಿಶ್ವ ವಚನ ಫೌಂಡೇಷನ್ ತಾಲೂಕು ಉಪಾಧ್ಯಕ್ಷ ಹನುಮಂತ ವಾಲೇಕರ್ ಮಾತನಾಡಿ, ಸಮಾಜದ ಎಲ್ಲ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ವಚನಕಾರರು ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಇಂದಿನ ಯುವ ಪೀಳಿಗೆ ವಚನದ ಆಳವನ್ನು ತಿಳಿದುಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕಿ ಶೋಭಾ ಮಾತನಾಡಿ, ಪ್ರತಿಯೊಬ್ಬರ ಮನೆ-ಮನಗಳಲ್ಲಿ ವಚನ ಸಾಹಿತ್ಯ ಬೆಳೆಸಲಿಕ್ಕೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ. ವಚನಗಳಿಂದ ಮನುಷ್ಯ ಕಲಿಯುವುದು ಅಪಾರವಿದೆ ಎಂದರು. ವಿದ್ಯಾರ್ಥಿಗಳಿಗೆ ವಚನ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಸವ ಸುಧೆ ವಚನ ಪುಸ್ತಕ, ಪ್ರಶಸ್ತಿ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net